ಕುಳಾಯಿ ಜೆಟ್ಟಿ ನಿರ್ಮಾಣದಿಂದ ಮೀನುಗಾರರ ಸಮಸ್ಯೆಗೆ ಪರಿಹಾರ : ಕೆಎಫ್‌ಡಿಸಿ ಅಧ್ಯಕ್ಷ ನಿತಿನ್ ಕುಮಾರ್
ಮಂಗಳೂರು : ಎನ್‌ಎಂಪಿಎ ಸಾಗರಮಾಲಾ ಯೋಜನೆ ಮತ್ತು ರಾಜ್ಯ ಸರ್ಕಾರದ ವತಿಯಿಂದ ಮಂಗಳೂರು ಹೊರವಲಯದ ಕುಳಾಯಲ್ಲಿ ಕಿರು ಮೀನುಗಾರಿಕಾ ಜೆಟ್ಟಿ ನಿರ್ಮಾಣದಿಂದ ಮೀನುಗಾರರ ಬಹುಕಾಲದ ಸಮಸ್ಯೆ ಪರಿಹಾರವಾಗಲಿದೆ. ಮಂಗಳೂರು ಬಂದರಿನ ಒತ್ತಡ ನಿವಾರಣೆಯಾಗಲಿದ್ದು, ಮಳೆಗಾಲದಲ್ಲೂ ಮೀನುಗಾರಿಕೆ ಮಾಡಲು ಅನುಕೂಲವಾಗಲಿದೆ ಎಂದು ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರು ಬಂದರಿನಲ್ಲಿ 1250 ಯಾಂತ್ರಿಕ ಮೀನುಗಾರಿಕೆ ಬೋಟ್ ಹಾಗೂ 500 ನಾಡದೋಣಿಗಳಿದ್ದು ಸ್ಥಳಾವಕಾಶದ ಕೊರತೆಯಿಂದ ತಂಗುದಾಣದಲ್ಲಿ ಪ್ರತೀದಿನ ಸಮಸ್ಯೆ ಉಂಟಾಗುತ್ತಿತ್ತು. ಮಳೆಗಾಲದಲ್ಲಿ ನಾಡದೋಣಿಗಳು ಎನ್‌ಎಂಪಿಎ ಪ್ರವೇಶಿಸಲು ಭದ್ರತೆಯ ಕಾರಣದಿಂದ ಕೆಲವು ನಿರ್ಬಂಧಗಳಿದ್ದವು. ಇದಕ್ಕೆ ಪರಿಹಾರವಾಗಿ 2ವರ್ಷದಿಂದ ಕುಳಾಯಿ ಯಲ್ಲಿ ಜೆಟ್ಟಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆದಿತ್ತು. ಆದರೆ ಕಾನೂನು ತೊಡಕಿನಿಂದ ಕಾಮಗಾರಿಗೆ ಅಡ್ಡಿಯಾಗಿತ್ತು. ಈಗ ತೊಡಕು ನಿವಾರಣೆಯಾಗಿ ಗುತ್ತಿಗೆ ಕಾಮಗಾರಿ ಒಪ್ಪಂದ ಪತ್ರ ಹಸ್ತಾಂತರವಾಗಿದೆ.
ಮುಂದಿನ 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಯೋಜನೆ ಕಾರ್ಯಗತವಾಗಲು ಪ್ರಯತ್ನಿಸಿದ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸಹಕರಿಸಿದ ಮೀನುಗಾರಿಕಾ ಸಚಿವ ಎಸ್. ಅಂಗಾರ ಮತ್ತು ಶಾಸಕ ಡಾ.ವೈ.ಭರತ್ ಶೆಟ್ಟಿ ಅವರನ್ನು ಮೀನುಗಾರರ ಪರವಾಗಿ ಅಭಿನಂದಿಸುವುದಾಗಿ ನಿತಿನ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





