ಬಂಟಕಲ್ಲು: ಉಚಿತ ರೇಬಿಸ್ ಲಸಿಕಾ ಶಿಬಿರದ ಉದ್ಘಾಟನೆ

ಶಿರ್ವ : ಉಡುಪಿ ಜಿಲ್ಲಾ ಪಂಚಾಯತ್, ಪಶುಸಂಗೋಪನಾ ಇಲಾಖೆ, ಶಿರ್ವ ಗ್ರಾಮ ಪಂಚಾಯತ್, ಪಶು ಚಿಕಿತ್ಸಾಲಯ, ರೋಟರಿ ಕ್ಲಬ್, ಲಯನ್ಸ್ ಜಾಸ್ಮಿನ್ ಬಂಟಕಲ್ಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಕು ನಾಯಿಗಳಿಗೆ ಸಾಮೂಹಿಕ ಉಚಿತ ರೇಬಿಸ್ ಲಸಿಕಾ ಶಿಬಿರವನ್ನು ಬಂಟಕಲ್ಲು ಅಂಗನವಾಡಿ ವಠಾರದಲ್ಲಿ ಏರ್ಪಡಿಸಲಾಗಿತ್ತು.
ಶಿಬಿರವನ್ನು ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ನ್ಯಾಯವಾದಿ ಜಯಕೃಷ್ಣ ಆಳ್ವ ವಹಿಸಿದ್ದರು. ರೋಟರಿ ದಂಡಪಾಣಿ ಸದಾನಂದ ಶೆಟ್ಟಿ ಕೋಡು, ಲಯನ್ಸ್ ಜಾಸ್ಮಿನ್ ಕಾರ್ಯದರ್ಶಿ ಅನಿತಾ ಮೆಂಡೊನ್ಸಾ, ಕೋಶಾಧಿಕಾರಿ ಐರಿನ್ ಸಿಕ್ವೇರಾ ವೇದಿಕೆಯಲ್ಲಿದ್ದರು.
ಶಿರ್ವ ಪಶು ಚಿಕಿತ್ಸಾಲಯದ ಪಶು ಆರೋಗ್ಯ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ನಾಯಿಗಳಿಗೆ ರೇಬಿಸ್ ರೋಗ ಬಂದ ಮೇಲೆ ಗುಣಪಡಿಸಲಾಗುವುದಿಲ್ಲ. ಅದರ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಪೂರ್ವಭಾವಿಯಾಗಿ ಲಸಿಕೆ ನೀಡುವ ಮೂಲಕ ರೋಗದಿಂದ ರಕ್ಷಣೆ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಹಿರಿಯ ಪಶುವೈದ್ಯಕೀಯ ಪರೀಕ್ಷಕ ಶಿವಪುತ್ರಯ್ಯ ಗುರುಸ್ವಾಮಿ, ವಸಂತ ಮಾದರ, ಸಹಾಯಕ ಸಿಬ್ಬಂದಿ ಸದಾನಂದ ಶೆಟ್ಟಿಗಾರ್, ಜಯೇಶ್, ಸ್ಥಳಿಯರಾದ ವಿನ್ಸೆಂಟ್ ಕೆಸ್ತಲಿನೊ ಪಲ್ಕೆ, ರವೀಂದ್ರ ಪಾಟ್ಕರ್ ಮಾನಿಪಾಡಿ, ಶ್ರವಣ್ ಶೆಟ್ಟಿ, ರೀನಾ ಡಿಸೋಜ, ಉಷಾ ಪಿ.ಮರಾಠೆ, ಮೊದಲಾದವರು ಉಪಸ್ಥಿತರಿದ್ದರು.







