2022-23ನೇ ಸಾಲಿನ ಧನವಿನಿಯೋಗ ವಿಧೇಯಕಕ್ಕೆ ವಿಧಾನಸಭೆ ಅಸ್ತು

ವಿಧಾನಸಭೆ
ಬೆಂಗಳೂರು, ಮಾ. 29: ‘2022-23ನೆ ಆರ್ಥಿಕ ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಖರ್ಚುಗಳನ್ನು ನಿಭಾಯಿಸಲು ರಾಜ್ಯದ ಸಂಚಿತ ನಿಧಿಯಿಂದ ವಿನಿಯೋಗಿಸಲು ಅವಕಾಶ' ಕಲ್ಪಿಸುವ ‘ಕರ್ನಾಟಕ ಧನವಿನಿಯೋಗ (ಸಂಖ್ಯೆ 2) ವಿಧೇಯಕ-2022' ಹಾಗೂ ‘2022-23ನೆ ಸಾಲಿನ ಆರ್ಥಿಕ ಕೊರತೆಯನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ.3.5ರಷ್ಟರ ವರೆಗೆ ರಾಜ್ಯ ಸಾಲದ ಪ್ರಮಾಣ ಹೆಚ್ಚಿಸಲು ಅವಕಾಶ' ನೀಡುವ ‘ಕರ್ನಾಟಕ ಆರ್ಥಿಕ ಹೊಣೆಗಾರಿಕೆ(ತಿದ್ದುಪಡಿ) ವಿಧೇಯಕ-2022' ಸೇರಿದಂತೆ ಮೂರು ವಿಧೇಯಕಗಳನ್ನು ಅಂಗೀಕರಿಸಲಾಯಿತು.
ಮಂಗಳವಾರ ವಿಧಾನಸಭೆಯ ಶಾಸನ ರಚನೆ ಕಲಾಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧೇಯಕವನ್ನು ಮಂಡಿಸಿ ಅಂಗಿಕರಿಸಲು ಕೋರಿದರು. ‘ರಾಜ್ಯದ ಸಾಲ ಮಾಡುವ ಪ್ರಮಾಣವನ್ನು ಹೆಚ್ಚಿಸಲು ಅವಕಾಶ ನೀಡುವ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ಕಾಯ್ದೆ'ಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
‘ಆರ್ಥಿಕ ಹೊಣೆಗಾರಿಕೆ ಕಾಯ್ದೆ ಪ್ರಕಾರ ಈ ಮೊದಲು ವಾರ್ಷಿಕ ಸಾಲದ ಪ್ರಮಾಣ ಆರ್ಥಿಕತೆಯ ಶೇ.3ರಷ್ಟು ಮೀರುವಂತೆ ಇರಲಿಲ್ಲ. ತಿದ್ದುಪಡಿಯಿಂದ ಈಗ ಶೇ.5ರಷ್ಟು ಸಾಲಕ್ಕೆ ಅವಕಾಶವಿದೆ. ಆರ್ಥಿಕ ಹೊಣೆಗಾರಿಕೆ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದರೂ ಆರ್ಥಿಕ ಶಿಸ್ತು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುವುದು. ತೆರಿಗೆ ಹೊರತಾದ ಮೂಲಗಳಿಂದ ಆದಾಯ ಸಂಗ್ರಹಿಸಲು ಹಾಕಿಕೊಂಡಿರುವ ಗುರಿಯನ್ನು ಕ್ರಮಿಸಲಾಗುವುದು' ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.
‘ತೆರಿಗೆ ಪಾವತಿ ಅವಧಿಯನ್ನು 15 ದಿನಗಳಿಂದ 1 ತಿಂಗಳಿಗೆ ವಿಸ್ತರಿಸುವುದಕ್ಕಾಗಿ ಮತ್ತು ಮೂರು ಸಾವಿರ ರೂ.ಗಳ ತ್ರೈ ಮಾಸಿಕವಾಗಿ ಪಾವತಿಸುವ ವಾಹನಕ್ಕೆ ಸಂಬಂಧಿಸಿದ ತೆರಿಗೆಯನ್ನು ತೆರಿಗೆಯ ಸಿಂಧುತ್ವವು ಮುಕ್ತಾಯವಾಗುವ ಮೊದಲ ಮಾಸಿಕವಾಗಿ ಪಾವತಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಮೋಟಾರ್ ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕ-2022ನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಮಂಡಿಸಿದರು. ಸ್ಪೀಕರ್ ಕಾಗೇರಿ ಮೂರು ವಿಧೇಯಕಗಳನ್ನು ಮತಕ್ಕೆ ಹಾಕಿದ ವೇಳೆ ಧ್ವನಿಮತದ ಅಂಗೀಕಾರ ದೊರೆಯಿತು.







