‘ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ ಹೇರಿ’ ಎಂಬ ಸಂದೇಶ ಹರಡಿದ ಕಿಡಿಗೇಡಿಗಳನ್ನು ಮಟ್ಟ ಹಾಕಿ: ಕುಮಾರಸ್ವಾಮಿ ಆಗ್ರಹ
''ದೇವಸ್ಥಾನದಲ್ಲಿ ದಲಿತರನ್ನು ಪೂಜೆ ಮಾಡಲು ಬಿಡುತ್ತಾರಾ?''

ಬೆಂಗಳೂರು, ಮಾ.29: ಮುಸ್ಲಿಮ್ ಸಮುದಾಯದ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಹರಡುತ್ತಿರುವ ಕಿಡಿಗೇಡಿಗಳಿಗೆ ಮುಲಾಜಿಲ್ಲದೆ ಕಡಿವಾಣ ಹಾಕಬೇಕು, ಈ ವಿಷಯದಲ್ಲಿ ಸರಕಾರ ಸುಮ್ಮನಿರಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ಮಂಗಳವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಷ್ಟೆಲ್ಲಾ ಆಗಿದ್ದರೂ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಎಲ್ಲವನ್ನೂ ನೋಡಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲ ಸಂಘಟನೆಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳು ಒಂದು ಸಮುದಾಯಕ್ಕೆ ಮೀಸಲಲ್ಲ. ಆರೂವರೆ ಕೋಟಿ ಕನ್ನಡಿಗರಿಗೆ ಸೇರಿದವರು. ಎಲ್ಲರ ರಕ್ಷಣೆ ಸರಕಾರದ ಹೊಣೆ. ಒಂದು ಸಮುದಾಯವನ್ನು ರಕ್ಷಣೆ ಮಾಡಿಕೊಂಡು ಸರಕಾರ ನಡೆಸಲು ಆಗದು. ಇಂತದ್ದನ್ನು ಕನ್ನಡಿಗರು ಸಹಿಸುವುದಿಲ್ಲ. ಅವರನ್ನು ಕಿತ್ತು ಒಗೆಯುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ನಾನು ವಾಟ್ಸಪ್‍ನಲ್ಲಿ ಬಂದ ಈ ಸಂದೇಶವನ್ನು ಗಮನಿಸಿದೆ. ಇಂಥ ಕಿಡಿಗೇಡಿ ಸಂದೇಶಗಳನ್ನು ಯಾರು ಹರಡುತ್ತಿದ್ದಾರೆ? ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಮಟ್ಟ ಹಾಕಬೇಕು. ಒಂದು ವೇಳೆ ಶಾಸಕರು, ಸಚಿವರೇ ಇದ್ದರೂ ಅವರನ್ನು ಬಂಧಿಸಬೇಕು ಹಾಗೂ ಅವರಿಗೆ ಜನರೇ ಬಹಿಷ್ಕಾರ ಹಾಕಬೇಕು ಎಂದು ಕುಮಾರಸ್ವಾಮಿ ಆಗ್ರಹಪಡಿಸಿದರು.
ಮುಸ್ಲಿಮ್ ಸಮುದಾಯದ ವ್ಯಾಪಾರಗಳಿಗೆ ನಿಷೇಧ ಹೇರಬೇಕು ಎನ್ನುವ ಸಂದೇಶದಲ್ಲಿ ಸುಮಾರು 23 ವಿಷಯಗಳ ಬಗ್ಗೆ ಪ್ರೋತ್ಸಾಹ ಕೊಡಬೇಡಿ ಅಂತ ಬರೆಯಲಾಗಿದೆ. ಹಣ್ಣಿನ ವ್ಯಾಪಾರ, ಹೋಟೆಲ್, ಹಾರ್ಡ್‍ವೇರ್, ಟ್ರಾವೆಲ್, ಕಿರಾಣಿ ಶಾಪುಗಳಿಗೆ ಹೋಗಬೇಡಿ. ಟ್ರಾವಲ್ ಬುಕಿಂಗ್, ಕಿರಾಣಿ ಅಂಗಡಿ, ಮುಸ್ಲಿಂ ವೈದ್ಯರ ಬಳಿ ಹೋಗಬೇಡಿ ಎಂದು ಜನರಿಗೆ ತಲೆ ಕೆಡಿಸುವ ಕೆಲಸ ಆಗುತ್ತಿದೆ ಎಂದು ಅವರು ಹೇಳಿದರು.
ಹಿಂದುಗಳ ಅಂಗಡಿಗಳಿಗೆ ಮಾತ್ರ ಹೋಗಿ ಅಂತ ಸಂದೇಶ ಹರಡುತ್ತಿದ್ದಾರೆ. ಇವರು ನಮ್ಮ ದೇಶವನ್ನು ಎಲ್ಲಿಗೆ ಒಯ್ಯುತ್ತಿದ್ದಾರೆ? ಸರ್ವ ಜನಾಂಗದ ತೋಟವನ್ನು ಸರ್ವನಾಶ ಮಾಡುತ್ತಿದ್ದಾರೆ. ಇಂತಹವರನ್ನು ಸುಮ್ಮನೆ ಬಿಡಬಾರದು. ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಿ ಎಂದರೆ ಅರ್ಥವೇನು? ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಕರ್ನಾಟಕದಲ್ಲಿ ಈ ರೀತಿಯ ಪರಿಸ್ಥಿತಿ ಬರಲಿಕ್ಕೆ ಜೆಡಿಎಸ್ ಆಗಲಿ ಅಥವಾ ಕುಮಾರಸ್ವಾಮಿ ಕಾರಣ ಅಲ್ಲ. ಕಾಂಗ್ರೆಸ್ ನೇರ ಕಾರಣ. ಅವರಿಂದಲೇ ಇಂಥ ಸರಕಾರ ಬಂದಿತು. ಈ ಕಾಂಗ್ರೆಸ್ ನಾಯಕರ ತೀರ್ಮಾನಗಳು ಮತ್ತು ಕಾಂಗ್ರೆಸ್‍ನವರು ಜೆಡಿಎಸ್‍ಗೆ ಕೊಟ್ಟ ಕಿರುಕುಳ ಇಂಥ ಪರಿಸ್ಥಿತಿಗೆ ಕಾರಣ. ಈ ನಾಡಿನ ಜನರು ಈ ಪರಿಸ್ಥಿತಿ ಅನುಭವಿಸಲಿಕ್ಕೆ ಒಂದು ಕಡೆ ಕಾಂಗ್ರೆಸ್, ಮತ್ತೊಂದು ಕಡೆ ಬಿಜೆಪಿಯವರೆ ಕಾರಣ ಎಂದು ಅವರು ಹೇಳಿದರು.
ಈ ಕಾರಣಕ್ಕೆ ನಾನು ಹಿಂದು ಸಮುದಾಯದ ಕೆಲ ಯುವಕರಿಗೆ ಕೈ ಮುಗಿದು ಹೇಳುತ್ತೇನೆ, ರಾಜ್ಯ ಹಾಳು ಮಾಡಿಕೊಳ್ಳಬೇಡಿ. ರಾಜಕೀಯಕ್ಕಾಗಿ ಮನಸುಗಳನ್ನು ಕೆಡಿಸುವ ಕಿಡಿಗೇಡಿಗಳ ಮಾತು ಕೇಳಬೇಡಿ. ಯಾರು ಕೂಡ ಇಲ್ಲಿ ಶಾಶ್ವತ ಅಲ್ಲ. ಕರ್ನಾಟಕ ಶಾಂತಿಯ ತೋಟ, ಇದನ್ನು ಹಾಳು ಮಾಡಬೇಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಈದ್ಗಾ ಮೈದಾನ ಉದಾಹರಣೆ: ಈದ್ಗಾ ಮೈದಾನದ ಹೆಸರಲ್ಲಿ ಹಲವಾರು ಅಮಾಯಕರ ಮಕ್ಕಳನ್ನು ಬಲಿ ತೆಗೆದುಕೊಂಡರು. ದೇವೇಗೌಡರು ಸಿಎಂ ಆಗುವ ತನಕ ಪ್ರತಿವರ್ಷ ಒಬ್ಬರು, ಇಬ್ಬರನ್ನಾದರೂ ಬಲಿ ಪಡೆಯುತ್ತಾ ಇದ್ದರು. ಅಂತಹ ಸಂದರ್ಭದಲ್ಲಿ ಈದ್ಗಾ ವಿವಾದವನ್ನು ದೇವೇಗೌಡರು ಬಗೆಹರಿಸಿದರು. ಇವತ್ತು ಏನಾಗಿದೆ? ಬಿಜೆಪಿಯವರು ಹೀಗೆಲ್ಲಾ ಮಾಡಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಅವರು ದೂರಿದರು.
ಸಿಎಂ ಬಗ್ಗೆ ಮಾತನಾಡಿದರೆ ಅರೆಸ್ಟ್ ಮಾಡುತ್ತಾರೆ: ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಬಿಜೆಪಿಯವರು. ಈ ರಾಜ್ಯದಲ್ಲಿ ಸರಕಾರ ಎನ್ನುವುದು ಇದೆಯಾ? ಏನು ಮಾಡುತ್ತಿದೆ ಸರಕಾರ? ಸಿಎಂ ವಿರುದ್ಧ ಮಾತಾಡಿದ್ದಕ್ಕೆ ಒಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ಇಂಥ ವಿಚಾರಗಳ ಬಗ್ಗೆ ಪ್ರಚೋದನೆ ಮಾಡುವವರನ್ನು ಕೂಡ ಅರೆಸ್ಟ್ ಮಾಡಿ. ಈ ರೀತಿಯಲ್ಲಿ ಪ್ರಚೋದನೆ ಮಾಡಿದರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನು ಕೂಡ ಅರೆಸ್ಟ್ ಮಾಡಿ ಎಂದು ಅವರು ಆಗ್ರಹಿಸಿದರು.
ಸಮಾಜವನ್ನು ಒಡೆಯುವ ಇವರು ದೇಶ ಉಳಿಸುವವರಲ್ಲ. ದೇಶ ಉಳಿಸುವವರು ಜನರು, ಮುಗ್ಧ ಪ್ರಜೆಗಳು. ನಾನು ಯುವಕರಿಗೆ ಹೇಳುತ್ತೇನೆ, ಯುವಕರು ಇದಕ್ಕೆ ಬಲಿಯಾಗಬಾರದು. ಇದರಿಂದ ನಿಮ್ಮ ಭವಿಷ್ಯ ರೂಪಿಸಲು ಆಗಲ್ಲ. ಹಿಂದು ಯುವಕರಿಗೆ ಕೈ ಮುಗಿದು ಹೇಳುತ್ತೇನೆ. ರಾಜ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಕುಮಾರಸ್ವಾಮಿ ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಇಂಥ ಕೃತ್ಯಗಳು ನಡೆಯುತ್ತಿದ್ದರೆ ಸದನದಲ್ಲಿ ಸಭಾಧ್ಯಕ್ಷರು ಚುನಾವಣೆ ಸುಧಾರಣೆ ಬಗ್ಗೆ ಚರ್ಚೆ ಇಟ್ಟುಕೊಂಡಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ಚರ್ಚೆ? ನನಗೆ ಈ ಕಲಾಪದಲ್ಲಿ ಭಾಗಿಯಾಗುವ ಉದ್ದೇಶ ಇರಲಿಲ್ಲ. ಆದರೆ ಇಂಥ ಸಮಾಜಘಾತುಕ ಸಂದೇಶಗಳ ಬಗ್ಗೆ, ಇವುಗಳ ಹಿಂದೆ ಇರುವವರನ್ನು ಹೊರಗೆ ಎಳೆಯಬೇಕು ಎನ್ನುವ ಬಗ್ಗೆ ಮಾತನಾಡಲು ಕಲಾಪಕ್ಕೆ ಬಂದೆ. ಸದನದಲ್ಲಿ ಇಂಥ ವಿಚಾರ ಚರ್ಚೆ ಆಗಬೇಕು ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.
ದಲಿತರನ್ನು ಪೂಜೆ ಮಾಡಲು ಬಿಡುತ್ತಾರಾ?: ಈ ಸಮಾಜವನ್ನು ವಿಘಟನೆ ಮಾಡುತ್ತಿರುವವರು ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತಾರಾ? ದೇವಸ್ಥಾನ ಕಟ್ಟುವರು ಓಬಿಸಿ, ದಲಿತರು. ಆದರೆ, ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆಯುವವವರು ಇಂಥ ಸಮಾಜವನ್ನು ವಿಘಟನೆ ಮಾಡುವ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.







