ಎ.1ರಂದು ಪರೀಕ್ಷಾ ಪೇ ಚರ್ಚಾ; ಪ್ರಧಾನಿ ಜತೆ ವಿದ್ಯಾರ್ಥಿಗಳ ನೇರ ಸಂವಾದದ 5ನೇ ಆವೃತ್ತಿ
ಮಂಗಳೂರು : ವಿಶ್ವದಾದ್ಯಂತದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸುವ ಸಂವಾದ ʼಪರೀಕ್ಷಾ ಪೇ ಚರ್ಚಾʼದ 5ನೇ ಆವೃತ್ತಿಯು ಎ.1ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮಕ್ಕಳಿಗೆ ಒತ್ತಡ ರಹಿತ ಪರೀಕ್ಷೆಗಳನ್ನು ಖಚಿತಪಡಿಸಿಕೊಳ್ಳಲು ಪರೀಕ್ಷಾ ಪೇ ಚರ್ಚಾವನ್ನು ಸಾರ್ವಜನಿಕ ಆಂದೋಲನವನ್ನಾಗಿ ಮಾಡಲು ಕೇಂದ್ರ ಮಾನವ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್ ಕರೆ ನೀಡಿದ್ದರು. ಅದರಂತೆ ಭಾರತ ಮತ್ತು ವಿದೇಶಗಳಿಂದ ಕೋಟ್ಯಂತರ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಲಿ ದ್ದಾರೆ. ಸೃಜನಾತ್ಮಕ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಸುಮಾರು ೧೫.೭ ಲಕ್ಷ ಸ್ಪರ್ಧಾಳುಗಳು ನೋಂದಣಿ ಮಾಡಿದ್ದಾರೆ ಎಂದರು.
ನಗರದ ಎಕ್ಕೂರು ಬಳಿಯಲ್ಲಿರುವ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಎನ್.ಎಸ್.ಯಾದವ್ ಮಾತನಾಡಿ, ಪರೀಕ್ಷೆಯ ಒತ್ತಡ ಮತ್ತು ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರಧಾನಿ ನೇರ ಸಂವಾದದಲ್ಲಿ ಪ್ರತಿಕ್ರಿಯಿಸಲಿದ್ದಾರೆ. ಹೊಸದಿಲ್ಲಿಯಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮ ವೀಕ್ಷಿಸಲು ದೇಶಾದ್ಯಂತ ಆಯ್ದ ವಿದ್ಯಾರ್ಥಿಗಳು ರಾಜಭವನಕ್ಕೆ ಭೇಟಿ ನೀಡಲಿದ್ದಾರೆ. ಕಾರ್ಯಕ್ರಮ ವಿವಿಧ ಮಾಧ್ಯಮಗಳಲ್ಲಿ ನೇರ ಪ್ರಸಾರಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರೀಯ ವಿದ್ಯಾಲಯದ ಶಿಕ್ಷಕ ರಾಜಾರಾಮ್ ಭಟ್ ಉಪಸ್ಥಿತರಿದ್ದರು.







