ಮಂಗಳೂರು: ಪಿಂಕಿ ನವಾಝ್, ಆಕಾಶಭವನ ಶರಣ್ ವಿರುದ್ಧ ಗೂಂಡಾ ಕಾಯ್ದೆ ಪ್ರಸ್ತಾವಕ್ಕೆ ಹೈಕೋರ್ಟ್ ಅಸ್ತು

ಪಿಂಕಿ ನವಾಝ್, ಆಕಾಶಭವನ ಶರಣ್
ಮಂಗಳೂರು : ಕುಖ್ಯಾತ ಕ್ರಿಮಿನಲ್ಗಳಾದ ಪಿಂಕಿ ನವಾಝ್ ಮತ್ತು ಆಕಾಶಭವನ ಶರಣ್ ವಿರುದ್ಧ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯವು ಹೇರಿದ್ದ ಗೂಂಡಾ ಕಾಯ್ದೆಗೆ ರಾಜ್ಯ ಹೈಕೋರ್ಟ್ ಅಸ್ತು ನೀಡಿದೆ. ಸದ್ಯ ಬೆಂಗಳೂರು ಮತ್ತು ವಿಜಯಪುರದ ಜೈಲಿನಲ್ಲಿರುವ ಇವರನ್ನು ಒಂದು ವರ್ಷ ನ್ಯಾಯಾಂಗ ಬಂಧನದಲ್ಲಿ ಮುಂದುವರಿಸಲು ರಾಜ್ಯ ಗೃಹ ಇಲಾಖೆಯು ಆದೇಶಿಸಿದೆ.
ಕೊಲೆ, ಕೊಲೆಯತ್ನ, ದರೋಡೆ, ಕಳ್ಳತನ ಸಹಿತ ಹಲವು ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರಿಗೆ ಬೇಕಾಗಿದ್ದ ಪಿಂಕಿ ನವಾಝ್ ಮತ್ತು ಆಕಾಶಭವನ ಶರಣ್ರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೆ ಇವರ ವಿರುದ್ಧ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ರ ಮಾರ್ಗದರ್ಶನದಂತೆ ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್, ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್, ಎಸಿಪಿ ಸಿಸಿಆರ್ಬಿ ರವೀಶ್, ಪೊಲೀಸ್ ಇನ್ಸ್ಪೆಕ್ಟರ್ಗಳಾದ ರಾಘವ ಪಡೀಲ್, ಚಂದ್ರಪ್ಪ ಮತ್ತಿತರರು ಇವರ ವಿರುದ್ಧ ಗೂಂಡಾ ಕಾಯ್ದೆ ಹೇರುವುದಕ್ಕಾಗಿ ಸಂಬಂಧಿಸಿದ ದಾಖಲೆಗಳನ್ನು ಸಿದ್ದಪಡಿಸಿದ್ದರು.
ಅದರಂತೆ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಹೇರಲು ರಾಜ್ಯ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೀಗ ರಾಜ್ಯ ಹೈಕೋರ್ಟ್ ಒಪ್ಪಿಗೆ ನೀಡಿದೆ.
ಈ ಮಧ್ಯೆ ಆರೋಪಿಗಳ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆ ದಾಖಲೆ ಸಂಗ್ರಹಿಸಿದ್ದ ಪೊಲೀಸ್ ತಂಡಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು 1 ಲಕ್ಷ ರೂ. ಮೊತ್ತದ ಬಹುಮಾನ ಘೋಷಿಸಿದ್ದಾರೆ.