ಮದ್ರಸಗಳ ಬಗ್ಗೆ ಸುಳ್ಳಾರೋಪ; ಶಾಸಕ ಸ್ಥಾನಕ್ಕೆ ರೇಣುಕಾಚಾರ್ಯ ರಾಜೀನಾಮೆ ನೀಡಲು ಆಗ್ರಹ
ಮಂಗಳೂರು : ಮದ್ರಸಗಳಲ್ಲಿ ದೇಶದ್ರೋಹ ಕಲಿಸಲಾಗುತ್ತಿದೆ. ಅವುಗಳನ್ನು ಮುಚ್ಚಿಸಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಸುಳ್ಳಾರೋಪ ಮಾಡಿದ್ದಾರೆ. ಹಾಗಾಗಿ ನೈತಿಕ ಹೊಣೆ ಹೊತ್ತು ಅವರು ಶಾಸಕ ಸ್ಥಾನಕ್ಕೆ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ದ.ಕ.ಜಿಲ್ಲಾಧ್ಯಕ್ಷ ಎಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಆಗ್ರಹಿಸಿದ್ದಾರೆ.
ಕರ್ನಾಟಕ ಸಹಿತ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಶಾಂತಿಧಾಮಗಳಾದ ಮದ್ರಸಗಳು ಬೆಳೆದು ಬರುತ್ತಿರುವ ಪುಟ್ಟ ಮಕ್ಕಳಿಗೆ ಇಸ್ಲಾಂ ಧರ್ಮದ ಬಾಲಪಾಠ, ದೇಶಪ್ರೇಮ ಮತ್ತು ಮಾನವ ಸೌಹಾರ್ದತೆಯ ಪಾಠ ಗಳನ್ನು ಕಲಿಸಿ ಅವರನ್ನು ದೇಶದ ಮುಖ್ಯವಾಹಿನಿ ಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಹಿಂದೆ ಕೂಡ ಬಿಜೆಪಿ ಜನಪ್ರತಿನಿಧಿಗಳು ಮದ್ರಸ ನಿಷೇಧಕ್ಕೆ ಒತ್ತಾಯಿಸುವ ಮೂಲಕ ಭಾರತದ ಸಂವಿಧಾನಕ್ಕೆ ಸಡ್ಡು ಹೊಡೆಯುವ ನೀಚ ಕೃತ್ಯ ಮಾಡಿದ್ದರು. ಅರಿವಿನ ಕೊರತೆ ಮತ್ತು ಅವಿವೇಕತನದ ಹೇಳಿಕೆ ನೀಡಿ ಇನ್ನೊಂದು ಸಮುದಾಯದ ಭಾವನೆಗಳನ್ನು ಕೆರಳಿಸುವ ವಿಕೃತ ಮನೋಭಾವದವರು ಯಾವತ್ತೂ ಜನಪ್ರತಿನಿಧಿ ಮತ್ತು ಸಮಾಜದ ಉನ್ನತ ಹುದ್ದೆಯಲ್ಲಿರಲು ಅನರ್ಹರು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.





