ಸಚಿವ ಆರ್.ಅಶೋಕ್ ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ: ಎಎಪಿ ಆರೋಪ

ಸಚಿವ ಆರ್.ಅಶೋಕ್ ತ
ಬೆಂಗಳೂರು, ಮಾ.29: ಭೂಗಳ್ಳರೊಂದಿಗೆ ಶಾಮೀಲಾಗಿ ಅಕ್ರಮವೆಸಗಿದ್ದ ಅಧಿಕಾರಿಗಳನ್ನು ಕಂದಾಯ ಸಚಿವ ಆರ್.ಅಶೋಕ್ ರಕ್ಷಿಸುತ್ತಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಆದೇಶಸಿದ್ದರೂ, ಸಚಿವರ ಪ್ರಭಾವದಿಂದಾಗಿ ಇನ್ನೂ ಶಿಕ್ಷೆಯಾಗಿಲ್ಲ ಎಂದು ಆಮ್ ಆದ್ಮಿ ಪಕ್ಷವು ಆರೋಪಿಸಿದೆ.
ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ಎಎಪಿಯ ಬೆಂಗಳೂರು ವಕೀಲರ ಘಟಕದ ಅಧ್ಯಕ್ಷ ಮಂಜುನಾಥ್ ಸ್ವಾಮಿ ಮಾತನಾಡಿ, ಬೆಂಗಳೂರು ದಕ್ಷಿಣದ ಉಪವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ಸೇರಿದಂತೆ ಇತರೆ ಅಧಿಕಾರಿಗಳು ಭೂಗಳ್ಳರ ಜೊತೆಗೂಡಿ ಅಕ್ರಮ ಎಸಗಿದ್ದಾರೆ. ಕಾನೂನುಬಾಹಿರವಾಗಿ ಮನೆ ಮತ್ತು ಮಳಿಗೆಗಳನ್ನು ಕಡೆವಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡತೇಗೂರು ಗ್ರಾಮದ ಸರ್ವೇ ನಂ.152/1ರಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಧಿಕಾರಿಗಳು ಅಕ್ರಮ ಎಸಗಿರುವುದು ಸಾಬೀತಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಆದರೆ ಕಂದಾಯ ಸಚಿವ ಆರ್.ಅಶೋಕ್ ಅವರ ಪ್ರಭಾವದಿಂದಾಗಿ ತಪ್ಪಿತಸ್ಥ ಅಧಿಕಾರಿಗಳಿಗೆ ಯಾವುದೇ ಶಿಕ್ಷೆಯಾಗಿಲ್ಲ ಎಂದರು.
ಆಮ್ ಆದ್ಮಿ ಪಾರ್ಟಿಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಮಾತನಾಡಿ, ಬಿಜೆಪಿ ಶಾಸಕ ಆರ್. ಅಶೋಕ್ ಅವರು ಸಚಿವರಾದ ಬೆನ್ನಲ್ಲೇ ನಗರದಲ್ಲಿ ಭೂಮಾಫಿಯಾ ಹಾವಳಿ ಹೆಚ್ಚಾಗಿದೆ. ಅಕ್ರಮವಾಗಿ ಜಮೀನನ್ನು ವಶಪಡಿಸಿಕೊಳ್ಳುವುದು, ಬೆದರಿಕೆ ಒಡ್ಡಿ ಒಕ್ಕಲೆಬ್ಬಿಸುವುದು ಮುಂತಾದ ಅಕ್ರಮಗಳು ಎಗ್ಗಿಲ್ಲದೇ ಸಾಗುತ್ತಿವೆ. ಕಂದಾಯ ಇಲಾಖೆಯ ಅಧಿಕಾರಿಗಳೇ ಭೂಮಾಫಿಯಾಗೆ ಸಹಕಾರ ನೀಡುತ್ತಿದ್ದಾರೆ. ಇದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಸಾಮಾನ್ಯ ಜನರು ಆತಂಕದಲ್ಲಿ ಬದುಕುವಂತಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಕಾರ್ತಿಕೇಯ, ಗುರುಪ್ರಸಾದ್, ಸೆಂತಿಲ್ ಕುಮಾರ್, ತೇಜಸ್ವಿನಿ, ವರ್ಷಿಕಾ ಮತ್ತಿತರರು ಉಪಸ್ಥಿತರಿದ್ದರು.







