ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರಿಂದ ಮಾನಹಾನಿ; ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು

ಸಾಂದರ್ಭಿಕ ಚಿತ್ರ
ಮಂಗಳೂರು : ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳು ತನ್ನ ಮತ್ತು ಗೆಳೆಯನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶ ಹರಡಿ ಮಾನಹಾನಿ ಮಾಡುತ್ತಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಕ್ಕದ ಇಮ್ರಾನ್ ಮುಹಮ್ಮದ್ ಎಂಬವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ.
ನಾನು ಸೌದಿ ಅರೇಬಿಯಾದಲ್ಲಿ ವ್ಯಾಪಾರ ಮಾಡಿಕೊಂಡಿದ್ದೇನೆ. ನನ್ನ ಗೆಳೆಯ ಸೈಯದ್ ಶೇಖ್ ಮಗ್ದೂಮ್ ಎಂಬವರು ಕೂಡ ಸೌದಿ ಅರೇಬಿಯಾದಲ್ಲೇ ಇದ್ದಾರೆ. ಇತ್ತೀಚೆಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ದಾಖಲಾದ ಪೊಕ್ಸೋ ಪ್ರಕರಣದಲ್ಲಿ ತಾನು ಮತ್ತು ಗೆಳೆಯ ಸೈಯದ್ ಶೇಖ್ ಮಗ್ದೂಮ್ ಕೂಡ ಭಾಗಿಯಾಗಿದ್ದಾರೆ ಎಂದು ಅಪರಿಚಿತ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶ ಹರಡಿ ಮಾನಹಾನಿ ಮಾಡಿದ್ದಾರೆ. ಗೌರವಕ್ಕೆ ಕುಂದುಂಟಾಗುವ ರೀತಿಯ ಸಂದೇಶ ರವಾನಿಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಮ್ರಾನ್ ಮುಹಮ್ಮದ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಅದರಂತೆ ಸುರತ್ಕಲ್ ಪೊಲೀಸರು ದೂರು ಸ್ವೀಕರಿಸಿದ್ದಾರೆ.