ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರ ಮನವಿಗೆ ಸಚಿವ ಈಶ್ವರಪ್ಪ ಸ್ಪಂದನೆ

ಉಪ್ಪಿನಂಗಡಿ: ಗ್ರಾ.ಪಂ. ಸದಸ್ಯರ ಬೇಡಿಕೆಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸ್ಪಂದಿಸಿದ್ದು, ಅವರ ಆದೇಶದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಒಳಚರಂಡಿ ನಿರ್ಮಾಣದ ಬಗ್ಗೆ ಯೋಜನಾ ನಕ್ಷೆ ತಯಾರಿಸಲು ಮಂಗಳವಾರ ಅಧಿಕಾರಿಗಳು ಭೇಟಿ ನೀಡಿದರು.
ತಾಲೂಕಿನ ಎರಡನೇ ಪ್ರಮುಖ ಪಟ್ಟಣವಾಗಿ ಬೆಳೆಯುತ್ತಿರುವ ಉಪ್ಪಿನಂಗಡಿಯಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲ. ಇದರಿಂದಾಗಿ ದ.ಕ. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ- ಕುಮಾರಧಾರ ನದಿಗಳಿಗೆ ಮಲೀನ ನೀರು ಸೇರಿಕೊಂಡು ನದಿ ನೀರು ಮಲೀನವಾಗುತ್ತಿತ್ತು. ನದಿ ನೀರು ಮಲೀನವಾಗದಂತೆ ತಡೆಯಲು ಹಾಗೂ ಭವಿಷ್ಯದ ದೃಷ್ಟಿಯಲ್ಲಿ ಉಪ್ಪಿನಂಗಡಿಯಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆಯಾಗಬೇಕೆಂಬ ಉದ್ದೇಶದೊಂದಿಗೆ 5 ಕೋ.ರೂ. ಅನುದಾನ ನೀಡಬೇಕೆಂದು ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ ಅವರ ನೇತೃತ್ವದ ಗ್ರಾ.ಪಂ. ಸದಸ್ಯರ ನಿಯೋಗ ಮಾ.28ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಸಚಿವ ಈಶ್ವರಪ್ಪ ಅವರನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಅರ್ಥೈಸಿತ್ತಲ್ಲದೆ, ಭವಿಷ್ಯದ ದೃಷ್ಟಿಯಿಂದ ಉತ್ತಮವಾದ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲು ಅನುದಾನ ಬಿಡುಗಡೆ ಮಾಡಿಕೊಡಬೇಕೆಂದು ಮನವಿ ಮಾಡಿತ್ತು. ತಕ್ಷಣವೇ ಇದಕ್ಕೆ ಸ್ಪಂದಿಸಿದ ಸಚಿವ ಈಶ್ವರಪ್ಪನವರು ಮೊಬೈಲ್ ಮೂಲಕ ಜಿ.ಪಂ. ಕಾರ್ಯನಿರ್ವಹಣಾಧಿಕಾರಿಯವರನ್ನು ಸಂಪರ್ಕಿಸಿ, ಕೂಡಲೇ ಉಪ್ಪಿನಂಗಡಿಯಲ್ಲಿ ಒಳಚರಂಡಿ ನಿರ್ಮಾಣಕ್ಕೆ ಯೋಜನಾ ನಕ್ಷೆ ತಯಾರಿಸಿ ನೀಡುವಂತೆ ಆದೇಶಿದ್ದರು. ಅದರಂತೆ ಮಾ.29ರಂದು ನವೀನ ಭಂಡಾರಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖಾ ಸಹಾಯಕ ಇಂಜಿನಿಯರ್ ರೂಪಲ್, ಜಿ.ಪಂ ಕಿರಿಯ ಎಂಜಿನಿಯರ್ ಸಂದೀಪ್ ಅವರ ತಂಡ ಉಪ್ಪಿನಂಗಡಿ ಭೇಟಿ ನೀಡಿದ್ದು, ನಾಲ್ಕೂವರೆ ಕಿ.ಮೀ. ಒಳಚರಂಡಿಯ ಯೋಜನಾ ನಕ್ಷೆಯನ್ನು ತಯಾರಿಸಿದೆ.
ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಸುರೇಶ್ ಅತ್ರೆಮಜಲು, ಧನಂಜಯ, ಮುಹಮ್ಮದ್ ತೌಸೀಫ್, ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್, ಸಿಬ್ಬಂದಿ ಇಸಾಕ್ ಉಪಸ್ಥಿತರಿದ್ದರು.





