ಹಾಸನ: ದಲಿತ ವಿದ್ಯಾರ್ಥಿಯ ಕೈಯಲ್ಲಿ ಚಪ್ಪಲಿ ಶುಚಿಗೊಳಿಸಿದ ಸವರ್ಣೀಯರು; ಆರೋಪ

ಹಾಸನ, ಮಾ.29: ಚಪ್ಪಲಿ ಕಳವುಗೈದಿರುವುದಾಗಿ ಆರೋಪ ಹೊರಿಸಿ 9ನೇ ತರಗತಿಯ ವಿದ್ಯಾರ್ಥಿಯೋರ್ವನಿಂದ ಸವರ್ಣೀಯರು ಚಪ್ಪಲಿ ಶುಚಿಗೊಳಿಸಿದ ಆರೋಪ ಹಾಸನ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಕೇಳಿ ಬಂದಿದೆ.
ಘಟನೆ ವಿವರ: ಪರಿಶಿಷ್ಟ ಜಾತಿಗೆ ಸೇರಿದ ರವಿಕುಮಾರ್ ಭವ್ಯ ದಂಪತಿಯ ಮಗ ದರ್ಶನ್ ಸರಕಾರಿ ಸೀಗೆ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಂಗಳವಾರ ಪರೀಕ್ಷೆ ಬರೆದು ವಾಪಸ್ ಗ್ರಾಮಕ್ಕೆ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಚಪ್ಪಲಿಯನ್ನು ಕಾಲುಗಳಿಂದ ಮುಟ್ಟಿದ್ದಾನೆ.
ಈ ಸಂದರ್ಭ ಲಿಂಗಾಯತ ಸಮುದಾಯಕ್ಕೆ ಸೇರಿದ ರೇವಣಸಿದ್ದಪ್ಪ, ಬಸವರಾಜು, ಮತ್ತು ಸಾಗರ್ ದರ್ಶನ್ ವಿರುದ್ಧ ಚಪ್ಪಲಿ ಕದ್ದಿರುವ ಆರೋಪ ಹೊರಿಸಿ ಹಲ್ಲೆ ನಡೆಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ದರ್ಶನ್‌ಗೆ ಹಲ್ಲೆ ನಡೆಸಿದ್ದೂ ಅಲ್ಲದೇ ಆತನ ಕೈಯಿಂದ ಚಪ್ಪಲಿಯನ್ನು ಶುಚಿಗೊಳಿಸಿದ್ದಾರೆ. ಈ ಬಗ್ಗೆ ದರ್ಶನ್‌ನ ಗೆಳೆಯ ದರ್ಶನ್ ಪೋಷಕರಿಗೆ ತಿಳಿಸಿದ್ದು, ಪೋಷಕರು ಕೂಡಲೇ ಸ್ಥಳಕ್ಕೆ ಬಂದಾಗ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘಟನೆಯ ಪ್ರಮುಖರು ಗ್ರಾಮಂತರ ಠಾಣೆಗೆ ದೂರು ನೀಡಿದ್ದಾರೆ.







