ಎಲ್ಲ ವರ್ಗದವರಿಗೆ ವ್ಯಾಪಾರ, ವಹಿವಾಟುಗಳನ್ನು ನಡೆಸಲು ಅವಕಾಶ ನೀಡಬೇಕು: ಕಾಂಗ್ರೆಸ್ ನಾಯಕರ ಮನವಿ

ಬೆಂಗಳೂರು, ಮಾ.29: ಸಮಾಜದಲ್ಲಿ ಕೋಮುದ್ವೇಷ ಬಿತ್ತಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿದ್ದು, ಮುಸ್ಲಿಮ್ ವರ್ತಕರೊಂದಿಗೆ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸುವಂತೆ ಹಿಂದುಗಳಿಗೆ ಕರೆ ನೀಡಿವೆ. ಆದರೆ, ಅವರ ಮನಸ್ಥಿತಿಯಂತೆ ಮುಸ್ಲಿಮರು ವರ್ತಿಸುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಪವಿತ್ರ ರಮಝಾನ್ ಮಾಸದ ಸಂದರ್ಭದಲ್ಲಿ ಮುಸ್ಲಿಮರು ಎಲ್ಲ ವರ್ಗದವರಿಗೆ ವ್ಯಾಪಾರ, ವಹಿವಾಟುಗಳನ್ನು ನಡೆಸಲು ಅವಕಾಶ ನೀಡಬೇಕು. ನಾವು ಯಾವುದೆ ಕಾರಣಕ್ಕೂ ಸಮಾಜದಲ್ಲಿ ದ್ವೇಷ ಭಾವನೆ ಬಿತ್ತಲು ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ನಾಯಕರಾದ ನಸೀರ್ ಅಹ್ಮದ್, ಎನ್.ಎ.ಹಾರೀಸ್ ಹಾಗೂ ಕೆ.ಅಬ್ದುಲ್ ಜಬ್ಬಾರ್ ಮನವಿ ಮಾಡಿದ್ದಾರೆ.
ರಮಝಾನ್ ಮಾಸದಲ್ಲಿ ರಾಜ್ಯದ ಮಸೀದಿಗಳ ಬಳಿ ಯಾರಾದರೂ ವ್ಯಾಪಾರ ಮಾಡಲು ಬಯಸಿದರೆ ಧರ್ಮದ ಆಧಾರದ ಮೇಲೆ ಅವರೊಂದಿಗೆ ಭೇದಭಾವ ಮಾಡಬೇಡಿ, ಶಾಂತಿ ಮತ್ತು ನೆಮ್ಮದಿಯಿಂದ ವ್ಯಾಪಾರ ಮಾಡಲು ಅವಕಾಶ ನೀಡಿ. ಇಸ್ಲಾಮ್ ಧರ್ಮದಲ್ಲಿರುವ ಸೌಹಾರ್ದತೆ, ಸಹಿಷ್ಣುತೆಯ ಸಂದೇಶವನ್ನು ಸಾರಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ನಸೀರ್ ಅಹ್ಮದ್ ಕೋರಿದರು.
ಕೆಲವೆಡೆ ಹಿಂದೂ ದೇವಾಲಯಗಳ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮ್ ವರ್ತಕರು ವ್ಯಾಪಾರ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಅದಕ್ಕೆ ಪ್ರತಿಯಾಗಿ ಕೆಲವು ಕಿಡಿಗೇಡಿಗಳು ರಮಝಾನ್ ಮಾಸದಲ್ಲಿ ಮುಸ್ಲಿಮರು ಅನ್ಯ ಧರ್ಮೀಯರೊಂದಿಗೆ ವ್ಯಾಪಾರ ಮಾಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವ ಸಂದೇಶಗಳು ವೈರಲ್ ಆಗುತ್ತಿವೆ. ವಾಸ್ತವವಾಗಿ, ರಾಜ್ಯದಲ್ಲಿ ದ್ವೇಷದ ವಾತಾವರಣವನ್ನು ಇನ್ನಷ್ಟು ಹೆಚ್ಚಿಸಲು ಬಯಸುವ ದುಷ್ಟ ಶಕ್ತಿಗಳೆ ಇಂತಹ ಸಂದೇಶಗಳನ್ನು ಹರಡಿಸುತ್ತಿವೆ ಎಂದು ಅವರು ಹೇಳಿದರು.
ಶಾಸಕ ಎನ್.ಎ.ಹಾರೀಸ್ ಮಾತನಾಡಿ, ಜನರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಮರೆಮಾಚಲು ಸರಕಾರ, ರಾಜಕೀಯ ಲಾಭಕ್ಕಾಗಿ ಧರ್ಮ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಇಂತಹ ಬೆಳವಣಿಗೆಗಳಿಂದ ದೇಶದ ಅಭಿವೃದ್ಧಿ ಹಾಗೂ ಶಾಂತಿ ಸುವ್ಯವಸ್ಥೆಗೆ ಗಂಭೀರವಾದ ಅಪಾಯವಿದೆ. ರಾಜ್ಯದ ಜನ ಈ ಎಲ್ಲ ಬೆಳವಣಿಗೆಗಳನ್ನು ಬುದ್ಧಿವಂತಿಕೆಯಿಂದ ನೋಡಬೇಕೆ ಹೊರತು, ಭಾವನಾತ್ಮಕವಾಗಿ ಅಲ್ಲ ಎಂದರು.
ಬೆಲೆ ಏರಿಕೆ, ನಿರುದ್ಯೋಗ, ಬಡತನ ಸೇರಿದಂತೆ ಅನೇಕ ಸಮಸ್ಯೆಗಳು ಸಮಾಜವನ್ನು ಕಾಡುತ್ತಿವೆ. ಆದರೆ, ರಾಜ್ಯದಲ್ಲಿ ಪ್ರತಿದಿನ ಒಂದಲ್ಲ ಒಂದು ಹೊಸ ಸಮಸ್ಯೆಗಳನ್ನು ಸೃಷ್ಟಿಸಿ, ಎಲ್ಲವನ್ನೂ ಕೋಮುವಾದದ ದೃಷ್ಟಿಕೋನದಿಂದ ನೋಡುವಂತೆ ಮಾಡಲಾಗುತ್ತಿದೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಸರಕಾರ ಅವರ ಜೊತೆಯೆ ಕೈ ಜೋಡಿಸಿ ನಿಲ್ಲಲು ಪ್ರಯತ್ನಿಸುತ್ತಿರುವುದು ವಿಷಾದನೀಯ ಎಂದು ಕೆ.ಅಬ್ದುಲ್ ಜಬ್ಬಾರ್ ತಿಳಿಸಿದರು.







