22 ಸಾವಿರ ಎಕರೆ ಭೂಮಿ ಸ್ವಾಧೀನ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಬೆಂಗಳೂರು, ಮಾ.29: ಮುಂದಿನ ದಿನಗಳಲ್ಲಿ ಕೈಗಾರಿಕೆಗೆ ಅಗತ್ಯ ಭೂಮಿ ನೀಡಲು 22 ಸಾವಿರ ಎಕರೆಯನ್ನು ಸ್ವಾದೀನ ಪಡಿಸಿಕೊಳ್ಳಲಾಗುತ್ತಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಮಂಗಳವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಅವರು, 2021-22ರಲ್ಲಿ 19564.53 ಸಾವಿರ ಕೋಟಿ ಬಂಡವಾಳ ಹರಿದು ಬರಲಿದೆ, 8792 ಉದ್ಯೋಗಗಳು ಸೃಷ್ಟಿಯಾಗಲಿದೆ. ಏಕ ಗವಾಕ್ಷಿ ಯೋಜನೆಯಡಿ ಒಟ್ಟು 561 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.
ಅದೇರೀತಿ, 42,714 ಬಂಡವಾಳ ಹೂಡಿಕೆಯಾಗಲಿದೆ, 12,7203 ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಮುಂದಿನ ದಿನಗಳಲ್ಲಿ ಬಂಡವಾಳ ಹೂಡಿಕೆಗೆ ಪೂರಕವಾಗಿ ಹೊಸದಾಗಿ 22 ಸಾವಿರ ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್, ಕೈಗಾರಿಕೆಗಳಿಗೆ ತಮಿಳುನಾಡಿನಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚಿನ ಭತ್ತೆ ನೀಡಲಾಗುತ್ತಿದೆ. ನಮ್ಮಲ್ಲಿ ಕೈಗಾರಿಕೆಗಳಿಗೆ ಅನುಮೋದನೆ ನೀಡಲು ಏಕಗವಾಕ್ಷಿ ಪದ್ಧತಿಯಡಿ ವಿಳಂಬವಾಗುತ್ತಿದೆ. ಅದಕ್ಕಾಗಿ ನಮ್ಮಲ್ಲಿ ಬಂಡವಾಳ ಹೂಡಿಕೆ ಮಾಡಲು ಬಂದ ಬಹಳಷ್ಟು ಕೈಗಾರಿಕೆಗಳು ತಮಿಳುನಾಡಿಗೆ ವಲಸೆ ಹೋಗುತ್ತಿವೆ ಎಂದು ಆಕ್ಷೇಪಿಸಿದರು.
ಈ ವೇಳೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಧ್ಯ ಪ್ರವೇಶಿಸಿ, ಮೂರು ವರ್ಷಗಳವರೆಗೂ ಯಾವ ರಹದಾರಿ ಇಲ್ಲದೆ ಕೈಗಾರಿಕೆ ಆರಂಭಿಸಬಹುದು. ಉತ್ಪಾದನೆ ಆರಂಭವಾದ ಬಳಿಕ ಮೂರು ಅಥವಾ ಕೈಗಾರಿಕೆ ಆರಂಭವಾದ ಮೂರು ವರ್ಷದಲ್ಲಿ ಅನುಮತಿ ಪಡೆದುಕೊಳ್ಳಬಹುದು. ಪರಿಸರ ಮಾಲಿನ್ಯ ಮಂಡಳಿ ಹೊರತುಪಡಿಸಿ ಉಳಿದ ಯಾವ ಅನುಮತಿಯೂ ಇಲ್ಲದೆ ಉದ್ಯಮ ಆರಂಭಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.







