ಶಿವಮೊಗ್ಗ ಜಿಲ್ಲೆಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 106 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ

ಬೆಂಗಳೂರು, ಮಾ.29: ಶಿವಮೊಗ್ಗ ನಗರೋತ್ಥಾನ ಹಂತ 3 ಮತ್ತು ಹಂತ-4 ರ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಕುರಿತು ವಿಕಾಸಸೌಧದಲ್ಲಿ ಇಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಶಿವಮೊಗ್ಗ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ಸಭೆ ನಡೆಸಿದರು.
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ನಗರಸಭೆ, ಪುರಸಭೆ, ಮತ್ತು ಪಟ್ಟಣ ಪಂಚಾಯತ್‍ಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 3 ನೇ ಮತ್ತು 4 ನೇ ಹಂತವನ್ನು ಅನುಷ್ಠಾನಗೊಳಿಸಲು ಕ್ರಿಯಾ ಯೋಜನೆ ರೂಪಿಸುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು. ಭದ್ರಾವತಿ ನಗರಸಭೆ(ಗ್ರೇಡ್ 1) 34 ಕೋಟಿ, ಸಾಗರ ನಗರಸಭೆ(ಗ್ರೇಡ್ 2) 25.50 ಕೋಟಿ, ಶಿಕಾರಿಪುರ ಪುರಸಭೆ-8.50 ಕೋಟಿ, ಶಿರಾಳಕೊಪ್ಪ ಪುರಸಭೆ-8.50 ಕೋಟಿ, ಸೊರಬ ಪುರಸಭೆ-8.50 ಕೋಟಿ, ಪಟ್ಟಣ ಪಂಚಾಯತಿ, ತೀರ್ಥಹಳ್ಳಿ-4.25 ಕೋಟಿ, ಪಟ್ಟಣ ಪಂಚಾಯತಿ, ಹೊಸನಗರ-4.25 ಕೋಟಿ, ಪಟ್ಟಣ ಪಂಚಾಯತಿ, ಜೋಗ ಕಾರ್ಗಲ್-4.25 ಕೋಟಿ, ಪಟ್ಟಣ ಪಂಚಾಯತಿ, ಹೊಳಹೊನ್ನೂರು-4.25 ಕೋಟಿ, ಪಟ್ಟಣ ಪಂಚಾಯತಿ, ಆನವಟ್ಟಿ-4.25 ಕೋಟಿ ಸೇರಿದಂತೆ ಒಟ್ಟು 106.25 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಕ್ರಿಯಾ ಯೋಜನೆಗೆ ತುರ್ತು ಅನುಮೋದನೆ ನೀಡಬೇಕಾದ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಸಚಿವ ಡಾ.ನಾರಾಯಣಗೌಡ ಸಭೆ ನಡೆಸಿ, ಕ್ರಿಯಾ ಯೋಜನೆ ಅನುಮೋದನೆ ನೀಡಿದರು. ಒಂದು ತಿಂಗಳೊಳಗೆ ಯೋಜನಾ ವರದಿ ಹಾಗೂ ಅಂದಾಜು ಪಟ್ಟಿ ಸಿದ್ದಪಡಿಸಿ ಟೆಂಡರ್ ಆಹ್ವಾನಿಸಲು ಕ್ರಮ ವಹಿಸಬೇಕು. ಹಾಗೂ 10 ತಿಂಗಳೊಳಗೆ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ನಾರಾಯಣಗೌಡ ಶಾಸಕರ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸೊರಬ ಶಾಸಕ ಕುಮಾರ ಬಂಗಾರಪ್ಪ, ಸಾಗರ ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್, ಜಿಲ್ಲಾಧಿಕಾರಿ ಸೆಲ್ವಮಣಿ ಸೇರಿದಂತೆ ನಗರಸಭೆ, ಪುರಸಭೆ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.







