ರಾಜ್ಯದಲ್ಲಿ 754 ಫ್ಯಾಕ್ಟರಿಗೆ ಬೀಗ; ಉದ್ಯೋಗ ಕಳೆದುಕೊಂಡವರೆಷ್ಟು ಗೊತ್ತೇ ?

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕೋವಿಡ್-19 ಸಾಂಕ್ರಾಮಿಕ ಆರ್ಥಿಕ ವ್ಯವಸ್ಥೆಯನ್ನು ಹದಗೆಡಿಸಿದೆ. ರಾಜ್ಯದಲ್ಲಿ ಈ ಅವಧಿಯಲ್ಲಿ 754 ಫ್ಯಾಕ್ಟರಿಗಳು ಮುಚ್ಚಲ್ಪಟ್ಟಿದ್ದು, 46,500 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇವರಿಗೆ ಸರ್ಕಾರದಿಂದ ಯಾವುದೇ ಆರ್ಥಿಕ ಪರಿಹಾರ ಅಥವಾ ಪರ್ಯಾಯ ಉದ್ಯೋಗ ಸಿಕ್ಕಿಲ್ಲ ಎಂದು times of india ವರದಿ ಮಾಡಿದೆ.
ಮಂಗಳವಾರ ವಿಧಾನ ಪರಿಷತ್‍ನಲ್ಲಿ ನೀಡಿದ ಅಂಕಿ ಅಂಶಗಳ ಪ್ರಕಾರ, ಸಣ್ಣ ಕೈಗಾರಿಕೆಗಳ ಪಾಲಿಗೆ 2020 ಅತ್ಯಂತ ಕರಾಳ ವರ್ಷವಾಗಿದ್ದು, 562 ಫ್ಯಾಕ್ಟರಿಗಳು ಈ ಅವಧಿಯಲ್ಲಿ ಮುಚ್ಚಿವೆ. 2021ರಲ್ಲೂ ಈ ಪ್ರವೃತ್ತಿ ಮುಂದುವರಿದಿದ್ದು, 192 ಘಟಕಗಳು ಮುಚ್ಚಿವೆ. ಇದರಿಂದಾಗಿ ರಾಜ್ಯದ ಆರ್ಥಿಕತೆಗೆ ಸಣ್ಣ ಕೈಗಾರಿಕಾ ವಲಯ ನೀಡುತ್ತಿದ್ದ ಕೊಡುಗೆ 2019-20ರ ಅವಧಿಯಲ್ಲಿ ಶೇಕಡ 21ರಷ್ಟು ಇದ್ದುದು 2020-21ನೇ ವರ್ಷದ ವೇಳೆಗೆ ಶೇಕಡ 19.4ಕ್ಕೆ ಕುಸಿದಿದೆ.
ಈ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡವರಿಗೆ ನೆರವು ನೀಡುವ ಯಾವುದೇ ಯೋಜನೆ ಸದ್ಯಕ್ಕೆ ಸರ್ಕಾರದ ಬಳಿ ಇಲ್ಲ ಎಂದು
ಸಣ್ಣ ಕೈಗಾರಿಕೆಗಳ ಖಾತೆ ಸಚಿವ ಎಂಟಿಬಿ ನಾಗರಾಜ್ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಶಾಸಕ ಯುಬಿ ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, "ಒಟ್ಟು 46585 ಮಂದಿ 2020, 2021ರಲ್ಲಿ ರಾಜ್ಯಾದ್ಯಂತ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಪೈಕಿ 31 ಸಾವಿರಕ್ಕೂ ಅಧಿಕ ಮಂದಿ 2020ರಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಎರಡು ವರ್ಷಗಳಲ್ಲಿ 92 ಸಾವಿರಕ್ಕೂ ಅಧಿಕ ಹೊಸ ಉದ್ಯೋಗ ಸೃಷ್ಟಿಸಲಾಗಿದೆ ಎಂದು ವಿವರಿಸಿದರು.
ಉತ್ಪನ್ನಗಳಿಗೆ ಬೇಡಿಕೆ ಕೊರತೆ, ಕಚ್ಚಾ ವಸ್ತುಗಳ ಅಭಾವ, ತಂತ್ರಜ್ಞಾನ ತಡೆ, ದುಡಿಯುವ ಬಂಡವಾಳದ ಕೊರತೆ, ಕಾರ್ಮಿಕರ ಸಮಸ್ಯೆಗಳು, ಸರ್ಕಾರದ ನೀತಿಗಳು, ಅನಪೇಕ್ಷಿತ ಆಸ್ತಿಗಳಲ್ಲಿ ಹೂಡಿಕೆ ಮತ್ತು ಆಂತರಿಕ ಆಡಳಿತಾತ್ಮಕ ಸಮಸ್ಯೆಗಳ ಕಾರಣದಿಂದ ಈ ಘಟಕಗಳು ಮುಚ್ಚಲ್ಪಟ್ಟಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೈಗಾರಿಕೆಗಳು ಉತ್ಪಾದನೆ ಪುನರಾರಂಭಕ್ಕೆ ಮಾರ್ಗಗಳನ್ನು ಹುಡುಕಬೇಕು ಎಂದು ಅವರು ಹೇಳಿದ್ದು, ಉದ್ಯೋಗ ಕಳೆದುಕೊಂಡವರಿಗೆ ಪರ್ಯಾಯವಾಗಿ ಕೌಶಲ ಆಧರಿತ ಉದ್ಯೋಗ ಒದಗಿಸುವ ಯಾವುದೇ ಯೋಜನೆ ಸದಸ್ಯಕ್ಕೆ ಇಲ್ಲ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷದಿಂದೀಚೆಗೆ ಕೈಗಾರಿಕೆಗಳು ಪುನಶ್ಚೇತನಗೊಂಡಿದ್ದು, ಗ್ರಾಮಗಳಿಗೆ ವಾಪಸ್ಸಾದ ಕಾರ್ಮಿಕರು ನಿಧಾನವಾಗಿ ಮರಳಿ ಬರುತ್ತಿದ್ದಾರೆ ಎಂದು ವಿವರಿಸಿದರು.







