ಲಖೀಂಪುರ್ ಖೇರಿ ಪ್ರಕರಣದ ಆರೋಪಿಯ ಜಾಮೀನು ರದ್ದತಿ ಕೋರಿ ಅರ್ಜಿ: ಉ.ಪ್ರ ಸರಕಾರದ ನಿಲುವು ಕೇಳಿದ ಸುಪ್ರೀಂ

ಹೊಸದಿಲ್ಲಿ: ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿದ ಪ್ರಕರಣದ ಆರೋಪಿಯಾಗಿರುವ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಅವರ ಜಾಮೀನು ರದ್ದತಿ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಈ ಅಪೀಲಿನ ಕುರಿತಂತೆ ಉತ್ತರ ಪ್ರದೇಶ ಸರಕಾರದ ಪ್ರತಿಕ್ರಿಯೆಯನ್ನು ಕೇಳಿದೆ.
ಈ ಪ್ರಕರಣದ ಎಸ್‍ಐಟಿ ತನಿಖೆಯ ಮೇಲುಸ್ತುವಾರಿಗಾಗಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ್ಯಾಯಾಧೀಶ ರಾಕೇಶ್ ಕುಮಾರ್ ಜೈನ್ ಅವರನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷದ ನವೆಂಬರ್ 17, 2021ರಂದು ನೇಮಿಸಿತ್ತು.
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಹಾಗೂ ಜಸ್ಟಿಸ್ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿ ತನಿಖೆಯ ಮೇಲುಸ್ತುವಾರಿ ವಹಿಸಿರುವ ನ್ಯಾಯಾಧೀಶರು ಜಾಮೀನು ರದ್ದತಿಗೆ ಅಪೀಲು ಸಲ್ಲಿಸಲು ಶಿಫಾರಸು ಮಾಡಿದ್ದಾರೆಂದು ತಿಳಿಯುತ್ತದೆ ಎಂದು ಹೇಳಿತಲ್ಲದೆ "ನಿಮ್ಮ ನಿಲುವೇನು?" ಎಂದು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಅವರನ್ನು ಪ್ರಶ್ನಿಸಿದೆ.
ಆದರೆ ಅವರು ತಮಗೆ ವರದಿ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು. ಆಗ ಪ್ರತಿಕ್ರಿಯಿಸಿದ ಜಸ್ಟಿಸ್ ಸೂರ್ಯ ಕಾಂತ್, ಉತ್ತರ ಪ್ರದೇಶ ಗೃಹ ಮುಖ್ಯ ಕಾರ್ಯದರ್ಶಿಗೆ ವಿಶೇಷ ತನಿಖಾ ತಂಡ ಎರಡು ಪತ್ರಗಳನ್ನು ಈ ಕುರಿತು ಬರೆದಿದೆ ಹಾಗೂ ಈ ಪತ್ರಗಳ ಉಲ್ಲೇಖ ಮೇಲುಸ್ತುವಾರಿ ವಹಿಸಿದ್ದ ನ್ಯಾಯಾಧೀಶರ ವರದಿಯಲ್ಲಿತ್ತು ಎಂದು ಹೇಳಿದರು.
ನಂತರ ಸಂಬಂಧಿತರಿಂದ ಮಾಹಿತಿ ಪಡೆದು ಪ್ರತಿಕ್ರಿಯಿಸಿದ ಜೇಠ್ಮಲಾನಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರ ಸ್ವೀಕರಿಸಿಲ್ಲ ಎಂದು ತೋರುತ್ತದೆ ಎಂದರಲ್ಲದೆ ಪ್ರತಿಕ್ರಿಯಿಸಲು ಹೆಚ್ಚುವರಿ ಸಮಯ ಕೇಳಿದರು.
ಜಾಮೀನು ಮಂಜೂರುಗೊಳಿಸಿ ಹೈಕೋರ್ಟ್ ನೀಡಿದ ಆದೇಶವನ್ನು ತಡೆಹಿಡಿಯಬೇಕು, ಈ ಆದೇಶವನ್ನು ಸರಿಯಾಗಿ ವಿವೇಚಿಸಿ ನೀಡಲಾಗಿಲ್ಲ ಎಂದು ಈ ಪ್ರಕರಣದ ಅರ್ಜಿದಾರರ ಪರ ವಕೀಲ ದುಷ್ಯಂತ್ ದವೆ ಹೇಳಿದರು.
ಫೆಬ್ರವರಿ 10ರಂದು ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠವು ಆಶಿಷ್ ಮಿಶ್ರಾ ಅವರಿಗೆ ಜಾಮೀನು ನೀಡಿತ್ತು.







