ಉಡುಪಿ ನಗರಸಭೆಯಿಂದ 3.4 ಕೋಟಿ ರೂ. ಮಿಗತೆಯ ಬಜೆಟ್ ಮಂಡನೆ

ಉಡುಪಿ : ಉಡುಪಿ ನಗರಸಭೆಯ 2022-23ನೆ ಸಾಲಿನ 3,04,78,000ರೂ. ಮಿಗತೆಯ ಆಯವ್ಯಯ ಮುಂಗಡ ಪತ್ರವನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಬುಧವಾರ ಮಂಡಿಸಿದರು.
ಈ ಬಾರಿಯ ಮುಂಗಡ ಪತ್ರದಲ್ಲಿ ಒಟ್ಟು ೧೫೫.೨೮ಕೋಟಿ ರೂ. ಆದಾಯ (ಆರಂಭದ ಶಿಲ್ಕು ೯೩.೩೬ಕೋಟಿ ರೂ. ಮತ್ತು ಒಟ್ಟು ಸ್ವೀಕೃತಿಗಳು ೬೪.೯೬ ಕೋಟಿ ರೂ.) ಹಾಗೂ ೧೫೨.೨೩ಕೋಟಿ ರೂ. ಒಟ್ಟು ವೆಚ್ಚಗಳನ್ನು ತೋರಿಸಲಾಗಿದೆ.
ಆದಾಯಗಳ ಅಂದಾಜು
15ನೆ ಕೇಂದ್ರ ಹಣಕಾಸು ಆಯೋಗದ ಅನುದಾನ ಒಟ್ಟು ೫.೧೪ ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ಮುಕ್ತನಿಧಿ ಅನುದಾನ ೨.೧೧ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ಸಿಬ್ಬಂದಿ ವೇತನ ಅನುದಾನ ೫.೭೨ ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ವಿದ್ಯುತ್ ಬಿಲ್ ಅನುದಾನ ೭.೦೩ಕೋಟಿ ರೂ., ಎಸ್‌ಎಫ್‌ಸಿ ವಿಶೇಷ ಅನುದಾನ ೬.೩೦ಕೋಟಿ, ಸ್ವಚ್ಛ ಭಾರತ್ ಮಿಷನ್ ಅನುದಾನ ೩.೩೩ಕೋಟಿ ರೂ., ಗೃಹ ಭಾಗ್ಯ ಯೋಜನೆ ೧೫ಲಕ್ಷ ರೂ., ಪಾರಂಪರಿಕ ತ್ಯಾಜ್ಯ ನಿರ್ವಹಣೆ ಅನುದಾನ ೩ಕೋಟಿ ರೂ. ಆದಾಯ ಅಂದಾಜಿಸಲಾಗಿದೆ.
ಸಂಸತ್/ವಿಧಾನಸಭಾ ಸದಸ್ಯರ ಅನುದಾನ ೧೦ಲಕ್ಷ ಹಾಗೂ ಅದಿಭಾರ ಶುಲ್ಕ ೨೫ ಲಕ್ಷವನ್ನು ಮತ್ತು ನಗರಸಭಾ ಆಸ್ತಿ ತೆರಿಗೆಯಿಂದ ಸರಾಸರಿ ೧೩೫೦ ಲಕ್ಷ ರೂ., ಉದ್ದಿಮೆ ಪರವಾನಿಗೆ ಶುಲ್ಕ ೯೦ ಲಕ್ಷ ಮತ್ತು ಜಾಹೀರಾತು ಶುಲ್ಕ ೧೮ ಲಕ್ಷ ರೂ., ಕಟ್ಟಡ ಪರವಾನಿಗೆ ಶುಲ್ಕ ೩೫ಲಕ್ಷ ರೂ., ನೀರು ಸರಬರಾಜು ಶುಲ್ಕದಿಂದ ೯.೫೦ಕೋಟಿ ರೂ., ವಾಣಿಜ್ಯ ಸಂಕೀರ್ಣಗಳಿಂದ ೧.೭೫ಕೋಟಿ ರೂ. ಆದಾಯ ವನ್ನು ನಿರೀಕ್ಷಿಸಲಾಗಿದೆ.
ವೆಚ್ಚಗಳ ಅಂದಾಜು
ಕಚೇರಿಯ ಆಡಳಿತಾತ್ಮಕ ವೆಚ್ಚಗಳಿಗೆ ೧.೭೧ಕೋಟಿ, ಲೋಕೋಪಯೋಗಿ ಕಾಮಗಾರಿಗಳಿಗೆ ನಗರಸಭಾ ನಿಧಿಯಿಂದ ೪.೨೩ಕೋಟಿ, ರಸ್ತೆ ಕಾಮಗಾರಿಗಳಿಗೆ ೨೩.೮೦ಕೋಟಿ ರೂ., ದಾರಿದೀಪಗಳ ದುರಸ್ತಿ ಹಾಗೂ ನಿರ್ವಹಣೆಗೆ ೪.೦೮ಕೋಟಿ, ಹೊಸ ದಾರಿ ದೀಪ ಅಳ ವಡಿಕೆಗೆ ೯೫.೫೬ಲಕ್ಷರೂ., ನೀರು ಸರಬರಾಜಿಗೆ ಸಂಬಂಧಿಸಿ ೧೬.೭೧ಕೋಟಿ ರೂ., ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಗೆ ೨೪.೦೬ ಕೋಟಿ ರೂ., ಒಳಚರಂಡಿ ಯೋಜನೆಗಳಿಗೆ ೮.೨೫ಕೋಟಿ ರೂ. ನಿಗದಿಪಡಿಸಲಾಗಿದೆ.
ಉದ್ಯಾನವನಗಳಿಗೆ ೧.೬೧ಕೋಟಿ ರೂ., ಸ್ಮಶಾನಗಳ ಅಭಿವೃದ್ಧಿಗಾಗಿ ೧.೬೨ಕೋಟಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶ್ರೇಯೋಭಿವೃದ್ಧಿ ನಿಧಿ ೧.೩೭ಲಕ್ಷ ರೂ., ವಿಕಲಚೇತನರ ಕಲ್ಯಾಣ ನಿಧಿ ೧೭.೫೮ಲಕ್ಷ ರೂ. ಲಕ್ಷ ರೂ., ಬಡ ಜನರ ಕಲ್ಯಾಣ ನಿಧಿಗೆ ೩೬.೯೭ರೂ.ವನ್ನು ಕಾದಿರಿಸಲಾಗಿದೆ.
ಅಭಿವೃದ್ಧಿ ಕಾರ್ಯಕ್ರಮಗಳು
ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ರಸ್ತೆಗಳಿಗೆ ಫುಟ್‌ಪಾತ್ ರಚಿಸಿ ರೇಲಿಂಗ್ ಆಳವಡಿಕೆ, ೩.೬೪ಕೋಟಿ ರೂ. ವೆಚ್ಚದಲ್ಲಿ ತೋಡುಗಳು, ತಡೆಗೋಡೆ, ಸಣ್ಣ ಸೇತುವೆಗಳ ನಿರ್ಮಾಣ ಹಾಗೂ ದುರಸ್ಥಿ, ನಗರದ ವಿಶ್ವೇಶ್ವರಯ್ಯ ಮಾರುಕಟ್ಟೆಯನ್ನು ಸಾರ್ವಜನಿಕ ಸಹಭಾಗಿತ್ವದೊಂದಿಗೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ, ಪರ್ಕಳದಲ್ಲಿ ೩.೫೦ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ಕಟ್ಟಡ ನಿರ್ಮಾಣ, ಸಂತೆಕಟ್ಟೆ, ಮಣಿಪಾಲಗಳಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಹಳೆ ತಾಲೂಕು ಕಚೇರಿ ಜಾಗದಲ್ಲಿ ನಗರಸಭೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ೧೩.೫೦ಕೋಟಿ ರೂ. ಮೀಸಲು. ಪೌರಕಾರ್ಮಿಕರ ಅನುಕೂಲಕ್ಕಾಗಿ ಬೀಡಿನ ಗುಡ್ಡೆ ಪ್ರದೇಶದಲ್ಲಿ ವಸತಿ ಸಮುಚ್ಛಯ ನಿರ್ಮಿಸುವ ಯೋಜನೆ, ಬೀಡಿನಗುಡ್ಡೆ, ಮಣಿಪಾಲ, ಮಲ್ಪೆಗಳಲ್ಲಿ ವಿಶ್ರಾಂತಿ ಗೃಹ ನಿರ್ಮಾಣ, ಮಲ್ಪೆ, ಉಡುಪಿ, ಮಣಿಪಾಲ ಪ್ರದೇಶವನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಡಿಬಿಎಂಎಫ್ ಮಾದರಿಯಲ್ಲಿ ಉಡುಪಿ ಅರ್ಬನ್ ಡಿಜಿಟಲ್ ಇನ್ಫ್ರಸ್ಟಕ್ಚರ್ ಪ್ರೊಜೆಕ್ಟ್‌ನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ, ವಿಪಕ್ಷ ನಾಯಕ ರಮೇಶ್ ಕಾಂಚನ್ ಹಾಜರಿದ್ದರು.
ಹಸಿಕಸ ನಿರ್ವಹಿಸಲು ಪ್ರೋತ್ಸಾಹ ಧನ
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಬಗ್ಗೆ ನಿಗಾ ವಹಿಸಲು ಸಿಸಿ ಕ್ಯಾಮೆರಾ ಅಳವಡಿಕೆ, ಮನೆಯಲ್ಲಿ ಹಸಿ ಕಸ ನಿರ್ವಹಿಸಲು ಶೇ.೫೦ರಷ್ಟು ಮೊತ್ತವನ್ನು ಪ್ರೋತ್ಸಾಹ ಧನವನ್ನಾಗಿ ನೀಡಲು ಯೋಜನೆ, ಪ್ರತಿದಿನ ೧೦೦ಕೆ.ಜಿ. ಗಿಂತ ಹೆಚ್ಚು ಘನತ್ಯಾಜ್ಯ ಉತ್ಪತ್ತಿ ಮಾಡುವ ವಸತಿ ಸಮುಚ್ಛಯಗಳು ಹೊಟೇಲ್‌ಗಳು ತಮ್ಮ ಹಂತದಲ್ಲಿ ನಿರ್ವಹಣೆ ಅಧಿಸೂಚನೆ ಹೊರಡಿಸಲು ಉದ್ದೇಶಿಸಲಾಗಿದೆ.
ಎಲ್ಲ ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಪರಿವರ್ತಿಸಲು ಪ್ರಸ್ತಾವನೆ ತಯಾರಿ ಮಾಡಲಾಗಿದೆ. ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣ ವಾಗಿ ಪುನರ್ ರಚಿಸಲು ೩.೩೦ಕೋಟಿ ವೆಚ್ಚದ ಪ್ರಸ್ತಾವನೆಗೆ ಸರಕಾರದಿಂದ ಒಪ್ಪಿಗೆ ನೀಡಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.
