ಔಷಧ ಕೊರತೆ, ವಿದ್ಯುತ್ ಕಡಿತದ ಸಮಸ್ಯೆ: ಶ್ರೀಲಂಕಾದ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ರದ್ದು

PHOTO COURTESY:TWITTER/@thespeed_news
ಕೊಲಂಬೊ, ಮಾ.30: ಸ್ವಾತಂತ್ರ್ಯ ಸಿಕ್ಕ ಬಳಿಕದ ಅತೀ ತೀವ್ರ ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿರುವ ಶ್ರೀಲಂಕಾದಲ್ಲಿ ಇದೀಗ ಔಷಧದ ಕೊರತೆ ಹಾಗೂ ವಿದ್ಯುತ್ ಕಡಿತದ ಸಮಸ್ಯೆಯಿಂದ ಹಲವು ಆಸ್ಪತ್ರೆಗಳು ಶಸ್ತ್ರಚಿಕಿತ್ಸೆಯಂತಹ ಪ್ರಮುಖ ಸೇವೆಯನ್ನು ರದ್ದುಗೊಳಿಸಿವೆ ಎಂದು ವರದಿಯಾಗಿದೆ.
ದಿನಕ್ಕೆ 10 ಗಂಟೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಸಂಜೆಯಾದೊಡನೆ ದ್ವೀಪರಾಷ್ಟ್ರದ ಬಹುತೇಕ ರಸ್ತೆಗಳಲ್ಲಿ ಗಾಡಾಂಧಕಾರ ಕವಿದಿರುತ್ತದೆ. ಸೀಮೆ ಎಣ್ಣೆ, ಪೆಟ್ರೋಲ್, ಅಡುಗೆ ಅನಿಲ ಹೀಗೆ ಜೀವನಾವಶ್ಯಕ ವಸ್ತುಗಳ ಕೊರತೆಯ ಜತೆ ಬೆಲೆಯೇರಿಕೆ ಸಮಸ್ಯೆಯೂ ಕಾಡುತ್ತಿದೆ.
ಈ ಹಿಂದೆ ಬಂದರುಗಳಲ್ಲಿನ ಗೋದಾಮಿಂದ ಆಹಾರ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ವಸ್ತುಗಳನ್ನು ದೇಶದ ಇತರ ಗ್ರಾಮೀಣ ಕೇಂದ್ರಗಳಿಗೆ ಸಾಗಿಸುತ್ತಿದ್ದ ಟ್ರಕ್ಗಳು ಈಗ ಅಲ್ಲಲ್ಲಿ ಸ್ಥಗಿತಗೊಂಡಿವೆ. ಜನರಿಂದ ತುಂಬಿ ತುಳುಕುತ್ತಿದ್ದ ಬಸ್ಸುಗಳ ಸಂಚಾರವೂ ವಿರಳವಾಗಿವೆ. ಬಹುತೇಕ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆ ನಡೆಸುವುದನ್ನು ರದ್ದುಗೊಳಿಸಿದ್ದರೆ, ಪೇಪರ್ಗಳ ಕೊರತೆಯಿಂದ ಈ ತಿಂಗಳು ನಡೆಯಬೇಕಿದ್ದ ಮಕ್ಕಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕೊಲಂಬೋದಲ್ಲಿ 60 ವರ್ಷದಿಂದ ಜೀವಿಸುತ್ತಿದ್ದೇನೆ.ಆದರೆ ಇಂತಹ ಪರಿಸ್ಥಿತಿ ಇದೇ ಮೊದಲ ಬಾರಿಗೆ ಎದುರಾಗಿದೆ. ತಿನ್ನಲು, ಕುಡಿಯಲು ಏನೂ ಸಿಗುತ್ತಿಲ್ಲ. ರಾಜಕಾರಣಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರೆ ಜನಸಾಮಾನ್ಯರು ಬೀದಿಯಲ್ಲಿ ಬಿಕ್ಷೆ ಬೇಡಿದರೂ ಏನೂ ದೊರಕದ ಪರಿಸ್ಥಿತಿಯಿದೆ ಎಂದು ಕೊಲಂಬೊದ ನಿವಾಸಿ ವದಿವು ಎಂಬವರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಸುಮಾರು 22 ಮಿಲಿಯನ್ ಜನಸಂಖ್ಯೆಯಿರುವ ದ್ವೀಪರಾಷ್ಟ್ರದಲ್ಲಿನ ಜನತೆಗೆ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ಹೊಸತೇನಲ್ಲ. 1970ರ ಜಾಗತಿಕ ತೈಲ ಬಿಕ್ಕಟ್ಟಿನ ಬಳಿಕ ಶ್ರೀಲಂಕಾದಲ್ಲಿ ಸಕ್ಕರೆ ಮುಂತಾದ ಅತ್ಯವಶ್ಯಕ ವಸ್ತುಗಳನ್ನು ಪಡಿತರ ವ್ಯವಸ್ಥೆಯ ಮೂಲಕ ವಿತರಿಸಲಾಗುತ್ತಿದೆ. ದಶಕಗಳ ಕಾಲದ ಅಂತರ್ಯುದ್ಧದಿಂದ 2009ರಲ್ಲಿ ಮುಕ್ತಿಪಡೆದು ಚೇತರಿಕೆಯ ಹಾದಿಯಲ್ಲಿದ್ದ ಶ್ರೀಲಂಕಾಕ್ಕೆ 2016ರಲ್ಲಿನ ಬರಗಾಲ ಮತ್ತು 2019ರಲ್ಲಿ ಶ್ರೀಲಂಕಾದ ಚರ್ಚ್ಗಳಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ(ಕನಿಷ್ಟ 279 ಮಂದಿ ಮೃತಪಟ್ಟಿದ್ದರು) ಪ್ರಕರಣಗಳು ಭಾರೀ ಆಘಾತ ನೀಡಿವೆ. ಬಾಂಬ್ದಾಳಿ ಘಟನೆಯ ಬಳಿಕ ವಿದೇಶೀಯರು ಶ್ರೀಲಂಕಾಕ್ಕೆ ಭೇಟಿ ನೀಡಲು ಭಯ ಪಡುವಂತಾಯಿತು.
ಇದರಿಂದ ಹಿನ್ನಡೆ ಅನುಭವಿಸಿದ್ದ ಪ್ರವಾಸೋದ್ದಿಮೆ ಕ್ಷೇತ್ರಕ್ಕೆ ಕೊರೋನ ಸಾಂಕ್ರಾಮಿಕ ಮಾರಕ ಪ್ರಹಾರ ನೀಡಿದೆ. ಇದರಿಂದ ಪ್ರವಾಸೋದ್ದಿಮೆಯೇ ಪ್ರಮುಖ ಆದಾಯ ಮೂಲವಾಗಿರುವ ದ್ವೀಪರಾಷ್ಟ್ರದಲ್ಲಿ ವಿದೇಶಿ ವಿನಿಮಯ ದಾಸ್ತಾನು ಕನಿಷ್ಟ ಮಟ್ಟಕ್ಕೆ ತಲುಪಿದೆ. ಇದೀಗ ವಸ್ತುಗಳನ್ನು ಆಮದು ಮಾಡಿಕೊಂಡರೆ ಪಾವತಿ ಮಾಡಲೂ ವಿದೇಶಿ ವಿನಿಮಯದ ಕೊರೆತೆಯಿದೆ. ಜೊತೆಗೆ, 51 ಬಿಲಿಯನ್ ಡಾಲರ್ನಷ್ಟು ಅಂತರಾಷ್ಟ್ರೀಯ ಸಾಲ ಮರುಪಾವತಿಗೆ ಬಾಕಿಯಿದೆ.
ಶ್ರೀಲಂಕಾ ವಿಶ್ವದ ಪ್ರಥಮ ಸಂಪೂರ್ಣ ಸಾವಯವ ಕೃಷಿ ದೇಶವಾಗಲಿದೆ ಎಂದು ಕಳೆದ ವರ್ಷ ಘೋಷಿಸಿದ್ದ ಅಧಿಕಾರಿಗಳು ರಾತ್ರೋರಾತ್ರಿ ವಿದೇಶದಿಂದ ರಸಗೊಬ್ಬರ ಆಮದನ್ನು ನಿಷೇಧಿಸಿದರು. ಇದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದರಿಂದ ಕೃಷಿ ಕಾರ್ಯ ಸ್ಥಗಿತಗೊಂಡಿತು ಮತ್ತು ಆಹಾರದ ಬೆಲೆ ಗಗನಕ್ಕೇರಿತು. ಇದೀಗ ಸರಕಾರ ಸಾಲ ಪಡೆಯಲು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಯ ಬಾಗಿಲು ಬಡಿಯುತ್ತಿದೆ. ಆದರೆ ಈ ವರ್ಷಾಂತ್ಯದವರೆಗೆ ಹೊಸ ಸಾಲ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು.
ದುರದೃಷ್ಟವಶಾತ್ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ. ಯಾಕೆಂದರೆ ಅರ್ಥವ್ಯವಸ್ಥೆಯನ್ನು ಹದಗೆಡಿಸಿದರೇ ಈಗಲೂ ಆರ್ಥಿಕ ಕ್ಷೇತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಕೊಲಂಬೊ ಮೂಲದ ಚಿಂತಕರ ವೇದಿಕೆ ಅಡ್ವೊಕಟ ಇನ್ಸ್ಟಿಟ್ಯೂಟ್ನ ಅಧ್ಯಕ್ಷ ಮುರ್ತಝ ಜಫರ್ಜಿ ಹೇಳಿದ್ದಾರೆ.
ಈ ಮಧ್ಯೆ, ಸರಕಾರದ ವಿರುದ್ಧ ಜನರ ಆಕ್ರೋಶ ಮತ್ತು ಅಸಮಾಧಾನ ಹೆಚ್ಚುತ್ತಿದೆ. ಈ ಹಿಂದೆ ಸಿಂಹಳೀಯ ಸಮುದಾಯದವರ ನೆಚ್ಚಿನ ಜನನಾಯಕರೆನಿಸಿದ್ದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಜನಪ್ರಿಯತೆ ಕುಸಿಯುತ್ತಿದೆ. ಕಳೆದ ವಾರ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಅಧ್ಯಕ್ಷರ ಕಚೇರಿಗೆ ನುಗ್ಗಲೂ ಪ್ರತಿಭಟನಾಕಾರರು ಪ್ರಯತ್ನಿಸಿದ್ದರು. ಸಾಮಾಜಿಕ ಮಾಧ್ಯಮ, ಜಾಲತಾಣದಲ್ಲೂ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಲಾಗುತ್ತಿದೆ.
ನಮ್ಮ ಭವಿಷ್ಯವೇ ಪ್ರಶ್ನಾರ್ಥಕ ಚಿಹ್ನೆಯಾಗಿ ಪರಿಣಮಿಸಿದೆ. ಪರಿಸ್ಥಿತಿ ಬದಲಾಗಲೇಬೇಕು ಎಂಬ ಕಾರಣಕ್ಕೆ ನಾವು ಪ್ರತಿಭಟಿಸುತ್ತಿದ್ದೇವೆ ಎಂಬುದು ಪ್ರತಿಭಟನಾಕಾರರ ನಿಲುವಾಗಿದೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಸರಕಾರದ ತಪ್ಪುನಿರ್ವಹಣೆ ಕಾರಣ: ಆರೋಪ
ದೇಶದಲ್ಲಿ ಈಗ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಸರಕಾರದ ತಪ್ಪುನಿರ್ವಹಣೆ ಕಾರಣ ಎಂದು ಅಡ್ವೊಕಟ ಇನ್ಸ್ಟಿಟ್ಯೂಟ್ನ ಅಧ್ಯಕ್ಷ ಮುರ್ತಝ ಜಫರ್ಜಿ ಪ್ರತಿಪಾದಿಸಿದ್ದಾರೆ.ದೀರ್ಘಕಾಲದ ಬಜೆಟ್ ಕೊರತೆ, ಸಾಂಕ್ರಾಮಿಕ ಆರಂಭಕ್ಕೆ ಸ್ವಲ್ಪ ಮೊದಲು ತೆರಿಗೆ ಕಡಿತದ ಸಲಹೆಯನ್ನು ಸರಕಾರ ಸಮ್ಮತಿಸಿದ್ದು(ಇದರಿಂದ ಸರಕಾರಕ್ಕೆ ದೊರಕುವ ಆದಾಯದಲ್ಲಿ ಕೊರತೆಯಾಗಿದೆ) ಮತ್ತು ವಿದ್ಯುತ್ ಹಾಗೂ ಇತರ ಅಗತ್ಯದ ಕ್ಷೇತ್ರಗಳಿಗೆ ಸಬ್ಸಿಡಿ ಘೋಷಿಸಿದ್ದು(ಇದರಿಂದ ಶ್ರೀಮಂತರಿಗೆ ಪ್ರಯೋಜನವಾಗಿದೆ) ಈಗಿನ ಆರ್ಥಿಕ ಬಿಕ್ಕಟ್ಟಿಗೆ ಮೂಲ ಕಾರಣ ಎಂದವರು ಹೇಳಿದ್ದಾರೆ.
ಜತೆಗೆ, ಸರಕಾರದ ಬೊಕ್ಕಸಕ್ಕೆ ಹೊರೆಯಾಗಿರುವ ‘ಬಿಳಿಯಾನೆ ಯೋಜನೆಗಳ’ ಅನುಷ್ಟಾನ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ. ಕೊಲಂಬೊದಲ್ಲಿ ನಿರ್ಮಿಸಿರುವ ತಾವರೆ ಆಕಾರದ ಗಗನಚುಂಬಿ ಕಟ್ಟಡ, ತಿರುಗುವ ರೆಸ್ಟಾರೆಂಟ್ ಯೋಜನೆಗಳಿಗೆ ಅಪಾರ ಪ್ರಮಾಣದ ಹಣ ವ್ಯಯಿಸಲಾಗಿದೆ. ಸರಕಾರದ ತಪ್ಪು ಕಾರ್ಯನೀತಿಯೂ ಸಮಸ್ಯೆಯನ್ನು ಹೆಚ್ಚಿಸಿದೆ ಎಂದವರು ಹೇಳಿದ್ದಾರೆ.







