ಮಂಗಳೂರು ವಿವಿ ಕಾರ್ಯಕ್ರಮ: ಕೇಸರಿ ಶಾಲು ಧರಿಸಲು ನಿರಾಕರಿಸಿದ ಡಾ. ಕಲ್ಲಡ್ಕ ಪ್ರಭಾಕರ್ ಭಟ್
ಚರ್ಚೆಗೆ ಕಾರಣವಾದ ವೀಡಿಯೊ

Photo: Video screengrab
ಮಂಗಳೂರು ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಆರ್ಎಸ್ಎಸ್ ಮುಖಂಡ, ಪ್ರಚೋದನಾಕಾರಿ ಭಾಷಣಕಾರ ಕಲ್ಲಡ್ಕ ಪ್ರಭಾಕರ ಭಟ್ ನ್ನು ಆಹ್ವಾನಿಸಿರುವುದು ಸಾಕಷ್ಟು ವಿವಾದಕ್ಕೆ, ಪ್ರತಿಭಟನೆಗೆ ಕಾರಣವಾಗಿದೆ.
ಇದರ ನಡುವೆ ಇದೀಗ, ಕಾರ್ಯಕ್ರಮದಲ್ಲಿ ಕೇಸರಿ ಶಾಲು ನೀಡಿದಾಗ ಅದನ್ನು ಧರಿಸಲು ಪ್ರಭಾಕರ್ ಭಟ್ ನಿರಾಕರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿದ ಬಳಿಕ ಮಂಗಳೂರು ವಿವಿ ಕುಲಪತಿ ಡಾ. ಸುಬ್ರಮಣ್ಯ ಯಡಪಡಿತ್ತಾಯ ಅವರು ಪ್ರಭಾಕರ್ ಭಟ್ ಗೆ ಕೇಸರಿ ಶಾಲು ಹೊದಿಸಲು ಬರುತ್ತಾರೆ. ಈ ವೇಳೆ ಕೇಸರಿ ಶಾಲು ಧರಿಸಲು ಪ್ರಭಾಕರ್ ಭಟ್ ನಯವಾಗಿ ನಿರಾಕರಿಸಿ ಅದನ್ನು ತೆಗೆದುಕೊಂಡು ಕೈಯಲ್ಲೇ ಹಿಡಿದುಕೊಳ್ಳುತ್ತಾರೆ. ಬಳಿಕ ಅವರ ಆಪ್ತ ಅದನ್ನು ತೆಗೆದುಕೊಂಡು ಹೋಗುತ್ತಾರೆ. ಆ ಬಳಿಕ ಕುಲಪತಿ ಯಡಪಡಿತ್ತಾಯ, ಪರೀಕ್ಷಾಂಗ ಕುಲಸಚಿವ ಡಾ. ಪಿ.ಎಲ್. ಧರ್ಮ ಅವರು ಕೇಸರಿ ಶಾಲು ಧರಿಸುತ್ತಾರೆ.
ಪ್ರಭಾಕರ್ ಭಟ್ ಕೇಸರಿ ಶಾಲು ಹಾಕಿಕೊಳ್ಳಲು ನಿರಾಕರಿಸಿದ ಘಟನೆ ಕುರಿತು ಪತ್ರಕರ್ತ ನವೀನ್ ಸೂರಿಂಜೆ ಫೇಸ್ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿದ್ದು, ಕಲ್ಲಡ್ಕ ಪ್ರಭಾಕರ್ ಭಟ್ ಅಂತಲ್ಲ. ಆರ್ ಎಸ್ ಎಸ್ ನ ಹಿರಿಯ ಬ್ರಾಹ್ಮಣ ನಾಯಕರು ಯಾರೂ ಕೂಡಾ ಕೇಸರಿ ಶಾಲು ಹಾಕಲ್ಲ. ಹೊಸಬಾಳೆಯಿಂದ ಹಿಡಿದು ಕಲ್ಲಡ್ಕದವರೆಗಿನ ಎಲ್ಲಾ ಬ್ರಾಹ್ಮಣ ನಾಯಕರು ಬಿಳಿ ಬಟ್ಟೆ, ಬಿಳಿ ಶಾಲು ಧರಿಸುತ್ತಾರೆ. ಕೇಸರಿ ಶಾಲು ಏನಿದ್ದರೂ ಬೀದಿಯಲ್ಲಿ ಜಗಳ ಮಾಡುವ ಹಿಂದುಳಿದ ವರ್ಗಗಳ ಹುಡುಗರು ಹಾಕಿಕೊಳ್ಳುವಂತದ್ದು. ಜೈಲಿಗೆ ಹೋಗಿವವರ, ಬೀದಿ ಜಗಳ ಮಾಡುವವರ, ಕೊಲೆ ಆಗುವವರ ಮತ್ತು ಕೊಲೆ ಮಾಡುವವರಿಗಷ್ಟೇ ಕೇಸರಿ ಶಾಲನ್ನು ಹಾಕುವಂತೆ ಪ್ರೇರೇಪಿಸಲಾಗುತ್ತದೆ. ಪ್ರಭಾಕರ ಭಟ್ಟರಂತಹ ಸಂಘಪರಿವಾರದ ನೂರಾರು ನಾಯಕರು ಒಂದು ದಿನವೂ ಕೇಸರಿ ಶಾಲು ಹಾಕದೇ ಮಡಿವಂತಿಕೆಯ ಸಂಕೇತವಾದ ಬಿಳಿ ವಸ್ತ್ರ,ಬಿಳಿ ಶಾಲನ್ನಷ್ಟೇ ಧರಿಸುತ್ತಾರೆ ಎಂದು ಹೇಳಿದ್ದಾರೆ.
ಅಲ್ಲದೆ, ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎಂದು ಹೇಳುವ ಹುಡುಗರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸದಾ ಒಂದಲ್ಲೊಂದು ಪ್ರಚೋದನಕಾರಿ ಹೇಳಿಕೆ ಮೂಲಕ ಸುದ್ದಿಯಲ್ಲಿರುವ ಪ್ರಭಾಕರ ಭಟ್, ಇತ್ತೀಚೆಗೆ ಕೇಸರಿ ಧ್ವಜವನ್ನು ಭಾರತದ ತ್ರಿವರ್ಣ ಧ್ವಜದ ಬದಲು ದೇಶದ ಅಧಿಕೃತ ಧ್ವಜವನ್ನಾಗಿಸುವ ಬಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಇದೀಗ ಅವರೇ, ಕೇಸರಿ ಶಾಲು ಧರಿಸಲು ನಿರಾಕರಿಸಿರುವುದು ʼಕೇಸರಿ ಶಾಲು ಹಿಂದುಳಿದವರಿಗೆʼ ಮಾತ್ರ ಮೀಸಲೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.







