ವಿಪಕ್ಷದ ಜತೆ ಕೈಜೋಡಿಸಿದ ಮಿತ್ರಪಕ್ಷ: ಬಹುಮತ ಕಳೆದುಕೊಂಡ ಇಮ್ರಾನ್ ಖಾನ್

PHOTO PTI
ಇಸ್ಲಮಾಬಾದ್, ಮಾ.30: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷದ ಪ್ರಮುಖ ಮಿತ್ರಪಕ್ಷ ಹಾಗೂ ಮೈತ್ರಿಕೂಟದ ಪ್ರಮುಖ ಸದಸ್ಯ ಎಂಕ್ಯೂಎಂ ಪಕ್ಷವು ವಿಪಕ್ಷದೊಂದಿಗೆ ಒಪ್ಪಂದ ಮಾಡಿಕೊಳ್ಳುವುದರೊಂದಿಗೆ ಇಮ್ರಾನ್ ಖಾನ್ ಗೆ ತೀವ್ರ ಹಿನ್ನಡೆಯಾಗಿದೆ ಎಂದು ವರದಿಯಾಗಿದೆ.
ಸಂಯುಕ್ತ ವಿರೋಧ ಪಕ್ಷ ಹಾಗೂ ಎಂಕ್ಯೂಎಂ ಒಪ್ಪಂದಕ್ಕೆ ಬಂದಿವೆ. ಈ ಒಪ್ಪಂದ ಅಂತಿಮಗೊಂಡ ಬಳಿಕ ಮಾಧ್ಯಮದವರಿಗೆ ಗುರುವಾರ ವಿವರ ನೀಡಲಾಗುವುದು ಎಂದು ಪ್ರಮುಖ ವಿಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ)ಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಟ್ವೀಟ್ ಮಾಡಿದ್ದಾರೆ.
ಇದರೊಂದಿಗೆ ಇಮ್ರಾನ್ ಖಾನ್ ಸರಕಾರ ಸಂಸತ್ತಿನ ಕೆಳಮನೆಯಲ್ಲಿ ಬಹುಮತ ಕಳೆದುಕೊಂಡಿದ್ದು, ಅವಿಶ್ವಾಸ ನಿರ್ಣಯವನ್ನು ಬೆಂಬಲಿಸುವವರ ಸಂಖ್ಯೆ 177ಕ್ಕೆ ತಲುಪಿದೆ. ಇಮ್ರಾನ್ ಸರಕಾರದ ಬಲ 164ಕ್ಕೆ ಕುಸಿದಿದೆ. ಅವಿಶ್ವಾಸ ನಿರ್ಣಯ ಅಂಗೀಕಾರವಾಗಬೇಕಿದ್ದರೆ 172 ಸದಸ್ಯರ ಬೆಂಬಲದ ಅಗತ್ಯವಿದೆ. ಈ ಬೆಳವಣಿಗೆಯಿಂದ ಇಮ್ರಾನ್ ಖಾನ್ ಸರಕಾರದ ಪತನ ಬಹುತೇಕ ನಿಶ್ಚಿತ ಎಂದು ಮಾಧ್ಯಮಗಳು ವರದಿ ಮಾಡಿವೆ. 342 ಸದಸ್ಯ ಬಲದ ನ್ಯಾಷನಲ್ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಇತರ ಕೆಲವು ಪಕ್ಷಗಳ ಬೆಂಬಲದಿಂದ 179 ಸದಸ್ಯಬಲದ ಸರಕಾರ ಸ್ಥಾಪಿಸಿತ್ತು. ಆದರೆ ಇದೀಗ ಎಂಕ್ಯುಎಂ ಪಕ್ಷ ಮೈತ್ರಿಯನ್ನು ತೊರೆದಿದೆ.
ಎಂಕ್ಯೂಎಂ ವಿಪಕ್ಷಗಳ ಜತೆ ಗುರುತಿಸಿಕೊಳ್ಳಲು ನಿರ್ಧರಿಸಿದೆ ಎಂಬ ವರದಿಯನ್ನು ಎಂಕ್ಯೂಎಂನ ಮುಖಂಡ ಫೈಸಲ್ ಸಬ್ಝವಾರಿ ದೃಢಪಡಿಸಿದ್ದಾರೆ. ಈ ಕುರಿತ ಒಪ್ಪಂದ ಅಂತಿಮಗೊಂಡಿದೆ ಎಂದವರು ಟ್ವೀಟ್ ಮಾಡಿದ್ದಾರೆ. ಇದೀಗ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸುವ ಕರಡು ನಿರ್ಣಯಕ್ಕೆ ನ್ಯಾಷನಲ್ ಅಸೆಂಬ್ಲಿಯಲ್ಲಿ ವಿಪಕ್ಷ ಮುಖಂಡ ಶಹಬಾರ್ ಶರೀಫ್, ಪಿಡಿಎಂ ಪಕ್ಷದ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹ್ಮಾನ್, ಪಿಪಿಯ ಅಧ್ಯಕ್ಷ ಆಸಿಫ್ ಅಲಿ ಝರ್ದಾರಿ ಸಹಿ ಹಾಕಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಜಿಯೊ ಟಿವಿ ವರದಿ ಮಾಡಿದೆ.
ಕೆಲವು ವ್ಯಕ್ತಿಗಳು ವಿದೇಶದ ಆರ್ಥಿಕ ನೆರವು ಪಡೆದು ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಪ್ರಧಾನಿ ಇಮ್ರಾನ್ ಖಾನ್ , ತನಗೆ ಇನ್ನೂ ಬಹುಮತವಿದೆ. ಈ ಕುರಿತ ಪತ್ರವನ್ನು ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರಿಗೆ ತೋರಿಸಲು ಸಿದ್ಧ ಎಂದಿದ್ದಾರೆ. ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಎಪ್ರಿಲ್ 3ರಂದು ನಡೆಯುವ ನಿರೀಕ್ಷೆಯಿದೆ.







