ಗುರುವಾರ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

ಬೆಂಗಳೂರು, ಮಾ 30: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಳೆ(ಮಾ.31) ರಾತ್ರಿ 10.30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಮರುದಿನ ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಜರುಗಲಿರುವ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, `ನಾಳೆ ಮಧ್ಯಾಹ್ನ 2.10ರ ಸುಮಾರಿಗೆ ಮುದ್ದೇನಹಳ್ಳಿಯಲ್ಲಿ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ `ನಂದಿನಿ ಕ್ಷೀರಾಭಿವೃದ್ದಿ ಬ್ಯಾಂಕ್' ಲೋಗೊ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.
`ನಾಳೆ ಸಂಜೆ 6 ಗಂಟೆಗೆ ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದು, ಪಕ್ಷದ ಪ್ರಮುಖರ ಸಭೆಯಲ್ಲಿ ನಡೆಸಲಿದ್ದಾರೆ. ಹಾಲು ಉತ್ಪಾದನೆ ಮತ್ತು ಇತರ ಚಟುವಟಿಕೆಗೆ ಆರ್ಥಿಕ ಸಂಸ್ಥೆ ಇರಬೇಕೆಂದು ಮನಗೊಂಡು ನಂದಿನಿ ಕ್ಷೀರಾಭಿವೃದ್ದಿ ಬ್ಯಾಂಕ್ ಸ್ಥಾಪನೆಯನ್ನು ಬಜೆಟ್‍ನಲ್ಲಿ ಘೋಷಿಸಿದ್ದೇವೆ. ದೇಶದಲ್ಲಿ ಮೊದಲ ಬಾರಿಗೆ ಹಾಲು ಉತ್ಪಾದಕರ ಬ್ಯಾಂಕ್ ತೆರೆಯಲಾಗುತ್ತಿದೆ. ಇದರಿಂದ ಹೈನುಗಾರರಿಗೆ ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು.
`ಸಹಕಾರ ಇಲಾಖೆಯಿಂದ ಯಶಸ್ವಿನಿ ಯೋಜನೆ ಪುನರ್ ಆರಂಭಿಸುವಂತೆ ಬೇಡಿಕೆ ಇತ್ತು. ಸರಕಾರ ಯಶಸ್ವಿನಿ ಯೋಜನೆಗೆ 300 ಕೋಟಿ ರೂ.ಮೀಸಲಿಟ್ಟಿದೆ. ಅದಕ್ಕೂ ಅಮಿತ್ ಶಾ ಅವರು ಚಾಲನೆ ನೀಡಲಿದ್ದು, ಕೆಲ ಬದಲಾವಣೆಗಳೊಂದಿಗೆ ಯೋಜನೆ ಜಾರಿ ಮಾಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.







