ಸಂವಿಧಾನದಿಂದ ದೇಶದ ಸಮಸ್ಯೆಗಳಿಗೆ ಪರಿಹಾರ: ನ್ಯಾ.ನಾಗಮೋಹನ್‍ದಾಸ್

ಬೆಂಗಳೂರು, ಮಾ.30: ದೇಶದ ಸಮಸ್ಯೆಗಳಿಗೆ ಸಂವಿಧಾನದ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ, ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಳ್ಳತ್ತಿರುವುದು ವಿಷಾದನೀಯ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ತಿಳಿಸಿದ್ದಾರೆ.
ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ದಳವಾಯಿ ಮೇಸ್ಟ್ರ ಅಭಿಮಾನಿ ಬಳಗ ಆಯೋಜಿಸಿದ್ದ ದಳವಾಯಿ ಮೇಸ್ಟ್ರು 60ರ ಬೀದಿ ನಾಟಕ, ಸಾಕ್ಷಚಿತ್ರ, ಪುಸ್ತಕ ಬಿಡುಗಡೆ, ಹಾಡುಗಳು, ನಾಟಕ ಪ್ರದರ್ಶನ, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಬಳಿಕ ದೇಶದ ಪ್ರಗತಿಗೆ ಸಂವಿಧಾನವೇ ಮೂಲ ಕಾರಣವಾಗಿದೆ. ಗ್ರಾಮೀಣ ಭಾಗಕ್ಕೆ, ಅನಕ್ಷರಸ್ಥರಿಗೆ ಸಂವಿಧಾನ ತಲುಪಿಸುವ ಕೆಲಸ ಆಗಿಲ್ಲ. ಇನ್ನಾದರೂ ಚಿತ್ರರಂಗ ಮುಂದೆ ಬಂದು ಸಂವಿಧಾನದ ಬಗ್ಗೆ ನೂರಾರು, ಸಾವಿರಾರು ಚಿತ್ರಗಳನ್ನು ತೆರೆಗೆ ತರಲಿ. ರಾಮಾಯಣ, ಮಹಾಭಾರತದ ಸಂದೇಶಗಳನ್ನು ಯಾವ ರೀತಿ ನಾಟಕ, ಹಾಡು, ಕತೆ, ವೀರಗಾಸೆ, ಹರಿಕತೆ, ಸಿನಿಮಾ, ಧಾರವಾಹಿಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆಯೋ ಅದೇ ರೀತಿ ಸಂವಿಧಾನವನ್ನೂ ಪ್ರಸಾರ ಮಾಡಬೇಕು ಎಂದು ಹೇಳಿದರು.
ರಾಜಪ್ಪ ದಳವಾಯಿ ಅವರ 8 ನಾಟಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು, ಭೂಮಿಯು ಸತ್ಯ ಮತ್ತು ಸತ್ವ ಒಳಗೊಂಡಿದೆ. ನೆಲ ಸ್ಪರ್ಶಿ ಆಡಳಿತದಲ್ಲಿ ನಿಜವಾದ ಪ್ರಜಾಪ್ರಭುತ್ವವಿದೆ. ಆದರೆ ಇಂದು ಜಾತಿ-ಜಾತಿಗಳ ನಡುವೆ ಕಂದಕ ಉಂಟಾಗುತ್ತಿದೆ. ಧರ್ಮ-ಧರ್ಮಗಳ ನಡುವೆ ದ್ವೇಷದ ಭಾವನೆ ವ್ಯಕ್ತವಾಗುತ್ತಿದೆ. ಹೀಗಾದರೆ ನಾವು ದ್ವೇಷದ ದ್ವೀಪ ದಾಟುವುದು ಯಾವಾಗ. ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರೂ ಅಪೇಕ್ಷೆಪಟ್ಟ ಸೌಹಾರ್ದತೆಯ ಸಮಾಜ ನಿರ್ಮಾಣವಾಗುವುದು ಯಾವಾಗ ಎಂದು ಪ್ರಶ್ನಿಸಿದರು.
ರಂಗಕರ್ಮಿ ಬಿ.ಎಂ.ರಾಜಾರಾಂ ಮಾತನಾಡಿ, ರಂಗಾಯಣಗಳಲ್ಲಿ ಸಂವಿಧಾನಕ್ಕೆ ಸಂಬಂಧಿಸಿದ ನಾಟಕಗಳನ್ನು ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಈ ಕೆಲಸ ಬಹಳ ಹಿಂದೆಯೇ ಆಗಬೇಕಿತ್ತು. ಮೈಸೂರಿನ ರಂಗಾಯಣದಿಂದ ದಳವಾಯಿ ಅವರ `ವಿ ದಿ ಪೀಪಲ್ ಆಫ್ ಇಂಡಿಯಾ' ನಾಟಕ ಪ್ರದರ್ಶಿಸಲಾಗುತ್ತಿದೆ ಎಂದರು.
ರಾಜಪ್ಪ ದಳವಾಯಿ ಅವರ ಬಗ್ಗೆ ವಿದ್ಯಾರ್ಥಿಗಳು ಹೊರತಂದಿರುವ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಡಾ.ರಾಜಪ್ಪ ದಳವಾಯಿ, ಮಂಜುಳಾ ದಳವಾಯಿ ದಂಪತಿಯನ್ನು ಶಿಷ್ಯರು ಆತ್ಮೀಯವಾಗಿ ಗೌರವಿಸಿದರು.






.jpg)
.jpg)

