ಶೀಘ್ರವೇ ಭಾರತದ ದೇಶಿನಿರ್ಮಿತ 4ಜಿ ಜಾಲ, ವರ್ಷಾಂತ್ಯಕ್ಕೆ 5ಜಿ ಆರಂಭ: ಸಚಿವ ಅಶ್ವನಿ ವೈಷ್ಣವ

PHOTO COURTESY:TWITTER/@SudhirN94847744
ಹೊಸದಿಲ್ಲಿ,ಮಾ.30: ಭಾರತದ ಸ್ವದೇಶಿ ನಿರ್ಮಿತ 4ಜಿ ಮೊಬೈಲ್ ಜಾಲವನ್ನು ಸಾಧ್ಯವಿದ್ದ ಅತ್ಯಂತ ಕಡಿಮೆ ಸಮಯದಲ್ಲಿ ಸಿದ್ಧಗೊಳಿಸಲಾಗಿದ್ದು,ಶೀಘ್ರವೇ ಅನುಷ್ಠಾನಗೊಳ್ಳಲಿದೆ ಮತ್ತು 2022ರ ಅಂತ್ಯದ ವೇಳೆಗೆ 5ಜಿ ಜಾಲವು ಸಿದ್ಧಗೊಳ್ಳಲಿದೆ ಎಂದು ದೂರಸಂಪರ್ಕ ಸಚಿವ ಅಶ್ವನಿ ವೈಷ್ಣವ ಅವರು ಬುಧವಾರ ಲೋಕಸಭೆಯಲ್ಲಿ ತಿಳಿಸಿದರು.
ಹಲವಾರು ವರ್ಷಗಳ ಬಳಿಕ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಸೇವೆಗಳನ್ನು ಉತ್ತಮಗೊಳಿಸುವ ಮೂಲಕ ಕಾರ್ಯಾಚರಣೆ ಲಾಭವನ್ನು ಗಳಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.ಭಾರತೀಯ ಇಂಜಿನಿಯರ್ಗಳು ದೇಶದ ಸ್ವಂತ 4ಜಿ ಜಾಲವನ್ನು ಅಭಿವೃದ್ಧಿಗೊಳಿಸಿದ್ದು,ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದು ಪ್ರಶ್ನೆವೇಳೆಯಲ್ಲಿ ತಿಳಿಸಿದ ಸಚಿವರು,‘ಭಾರತವು ತನ್ನ 4ಜಿ ಜಾಲವನ್ನು ಇಷ್ಟು ಬೇಗ ನಿರ್ಮಿಸಿದ್ದು ಹೇಗೆ ಎಂಬ ಅಚ್ಚರಿಯೊಂದಿಗೆ ಇಡೀ ವಿಶ್ವವೇ ನಮ್ಮತ್ತ ನೋಡುತ್ತಿದೆ. ನಮ್ಮ 5ಜಿ ಜಾಲ ವರ್ಷಾಂತ್ಯದಲ್ಲಿ ಸಿದ್ಧಗೊಳ್ಳಲಿದೆ ಎಂದು ವಿಜ್ಞಾನಿಗಳು ನಿರೀಕ್ಷಿಸಿದ್ದಾರೆ ’ ಎಂದರು.
ದೇಶದ ಹಲವಾರು ಪ್ರದೇಶಗಳಲ್ಲಿ ಕಳಪೆ ಸಂಪರ್ಕ ಕುರಿತು ಪೂರಕ ಪ್ರಶ್ನೆಗೆ ಉತ್ತರಿಸಿದ ವೈಷ್ಣವ,ಮೊಬೈಲ್ ದೂರಸಂಪರ್ಕ ಜಾಲಗಳನ್ನು ಉತ್ತಮಗೊಳಿಸಲು ಸರಕಾರವು ಒಂಭತ್ತು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು,ಮಹತ್ವಾಕಾಂಕ್ಷಿ ಜಿಲ್ಲೆಗಳು ಮತ್ತು ಈಶಾನ್ಯ ಪ್ರದೇಶದಲ್ಲಿ 9,000ಕ್ಕೂ ಅಧಿಕ ಮೊಬೈಲ್ ಟವರ್ಗಳ ನಿರ್ಮಾಣ ಇವುಗಳಲ್ಲಿ ಸೇರಿದೆ. ಇದರ ಜೊತೆಗೆ ದೇಶಾದ್ಯಂತ 60,200ಕ್ಕೂ ಅಧಿಕ ಗ್ರಾಮಗಳಲ್ಲಿ ಮೊಬೈಲ್ ಮೂಲಸೌಕರ್ಯವನ್ನು ಹೆಚ್ಚಿಸಲು 6,446 ಕೋ.ರೂ.ಗಳ ಯೋಜನೆಯನ್ನೂ ಕೈಗೆತ್ತಿಕೊಳ್ಳಲಾಗಿದೆ. ಈ ಎಲ್ಲ ಉಪಕ್ರಮಗಳ ಫಲಿತಾಂಶಗಳು ಗೋಚರಿಸತೊಡಗಿದ್ದು,ದೇಶದ ವಿವಿಧ ಭಾಗಗಳಲ್ಲಿ ಮೊಬೈಲ್ ಜಾಲಗಳಲ್ಲಿ ಗಣನೀಯ ಸುಧಾರಣೆಗಳಾಗಿವೆ ಎಂದು ತಿಳಿಸಿದರು.
ಬಿಎಸ್ಎನ್ಎಲ್ ಕುರಿತು ಪ್ರಸ್ತಾಪಿಸಿದ ವೈಷ್ಣವ,ಕಂಪನಿಯ ದುರವಸ್ಥೆಗೆ ಯಾರು ಹೊಣೆಯಾಗಿದ್ದರು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ, ಆದರೆ ಸರಕಾರವು ತೆಗೆದುಕೊಂಡಿರುವ ಕ್ರಮಗಳಿಂದಾಗಿ ಸುದೀರ್ಘ ಸಮಯದ ಬಳಿಕ ಕಾರ್ಯಾಚರಣೆ ಲಾಭವನ್ನು ಗಳಿಸಲು ಬಿಎಸ್ಎಲ್ಎನ್ಗೆ ಸಾಧ್ಯವಾಗಿದೆ ಮತ್ತು ಜನರು ಇದನ್ನು ಒಪ್ಪಿಕೊಳ್ಳಬೇಕು ಎಂದರು.
2019ರಲ್ಲಿ 69,000 ಕೋ.ರೂ.ಗಳನ್ನು ಪ್ರಕಟಿಸಿದ ಬಳಿಕ ಬಿಎಸ್ಎನ್ಎಲ್ ಸ್ಥಿರವಾದ ಘಟಕವಾಗಿದೆ. ಈ ವರ್ಷದ ಮುಂಗಡಪತ್ರದಲ್ಲಿಯೂ 44,720 ಕೋ.ರೂ.ಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.







