ಉಡುಪಿ: ಮತ್ತೆ ರಾಜ್ಯ ಸರಕಾರದ ತೆಕ್ಕೆಗೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ
ಉಡುಪಿ : ಕಳೆದ ಎಂಟು ದಶಕಗಳಿಂದ ಜಿಲ್ಲೆಯ ಹಾಗೂ ಹೊರಜಿಲ್ಲೆಗಳ ಬಡಜನರಿಗೆ ಅತ್ಯುತ್ತಮ ಸೇವೆ ಸಲ್ಲಿಸಿ ಜನಖ್ಯಾತಿ ಪಡೆದಿದ್ದು, ಖಾಸಗಿಯವರ ನಿರ್ವಹಣೆಗೆ ಒಳಗೊಂಡ ಬಳಿಕ ದುಸ್ಥಿತಿಗೆ ಒಳಗಾಗಿದ್ದ ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯನ್ನು ರಾಜ್ಯ ಸರಕಾರ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಈ ಕುರಿತ ಐತಿಹಾಸ ನಿರ್ಣಯವನ್ನು ರಾಜ್ಯ ಸಚಿವ ಸಂಪುಟ ಇಂದು ತೆಗೆದುಕೊಂಡಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಸ್ಪತ್ರೆಯ ನಿರ್ವಹಣೆಯನ್ನು ಸರಕಾರಕ್ಕೆ ಹಸ್ತಾಂತರ ಮಾಡಿ ನಿರ್ಣಯ ಕೈಗೊಂಡಿದೆ ಎಂದವರು ತಿಳಿಸಿದ್ದಾರೆ.
200 ಬೆಡ್‌ಗಳ ಈ ಆಸ್ಪತ್ರೆಗೆ ಪ್ರಸ್ತುತ ಇರುವ ಎಲ್ಲಾ ಸಿಬ್ಬಂದಿಗಳ ಸಹಿತ 103 ಮಂದಿ ಹೆಚ್ಚುವರಿ ಸಿಬ್ಬಂದಿ ಹಾಗೂ ವಾರ್ಷಿಕ ಅನುದಾನ 9.83 ಕೋಟಿ ರೂ.ಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.
ಉಡುಪಿ ಜನತೆಗೆ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಕೈಗೊಂಡ ಈ ಐತಿಹಾಸಿಕ ನಿರ್ಣಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಉಡುಪಿ ಜನತೆಯ ಪರವಾಗಿ ಶಾಸಕ ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.
ಬಡ ಹೆಣ್ಣು ಮಕ್ಕಳಿಗೆ ಉಚಿತ ಹೆರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ನಿಯಮ ಬಾಹಿರವಾಗಿ ಖಾಸಗಿಯವರ ವಶಕ್ಕೆ ನೀಡಲಾಗಿತ್ತು. ಖಾಸಗಿಯವರು ಅದರ ನಿರ್ವಹಣೆ ಸರಿಯಾಗಿ ನಡೆಸದೆ, ಆಸ್ಪತ್ರೆಯ ಸಿಬ್ಬಂದಿಗಳಿಗೆ ವೇತನವನ್ನು ಸರಿಯಾಗಿ ಪಾವತಿಸದೆ, ಆಸ್ಪತ್ರೆಗೆ ಆಗಮಿಸುವ ಬಡ ರೋಗಿಗಳಿಗೆ ಸಮರ್ಪಕವಾದ ಚಿಕಿತ್ಸೆಯೂ ದೊರಕದೆ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿತ್ತು ಎಂದು ಆರೋಪಿಸಲಾಗಿದೆ.
ಬಡರೋಗಿಗಳ ಹಿತದೃಷ್ಟಿಯಿಂದ ಈ ಆಸ್ಪತ್ರೆಯ ನಿರ್ವಹಣೆಯನ್ನು ಸಮರ್ಪಕವಾಗಿ ನಡೆಸುವ ನಿಟ್ಟಿನಲ್ಲಿ ಸರಕಾರ ಮಧ್ಯ ಪ್ರವೇಶಿಸಿ ತನ್ನ ವಶಕ್ಕೆ ಪಡೆಯುವಂತೆ ಶಾಸಕ ರಘುಪತಿ ಭಟ್ ಇಲಾಖೆ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಿದ್ದಲ್ಲದೇ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು. ಈ ಬಗ್ಗೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ನೀಡಿದ್ದರು.
250 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದ ಉಡುಪಿ ಜಿಲ್ಲಾ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡದ ಶಿಲಾನ್ಯಾಸದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಹ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರದ ವಶಕ್ಕೆ ಪಡೆದು ನಿರ್ವಹಿಸುವ ಬಗ್ಗೆ ಭರವಸೆ ನೀಡಿದ್ದರು.
ಅದರಂತೆ ಪ್ರಸ್ತುತ ಇರುವ ಎಲ್ಲಾ ಸಿಬ್ಬಂದಿ ಸಹಿತ 200 ಬೆಡ್‌ಗಳ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಯನ್ನು ಸರಕಾರಕ್ಕೆ ಹಸ್ತಾಂತರಿಸಿ ನಿರ್ಣಯ ಕೈಗೊಳ್ಳಲಾಗಿದೆ.