ಬೆಂಗಳೂರು: ಗುರುವಾರ ‘ಶಾಂತಿ, ಸೌಹಾರ್ದ, ಸಾಮರಸ್ಯ, ಸಮೃದ್ಧ ಕರ್ನಾಟಕ ನಿರ್ಮಾಣ' ವಿಚಾರ ಸಂಕಿರಣ
ಬೆಂಗಳೂರು, ಮಾ. 30: ‘ಶಾಂತಿ, ಸೌಹಾರ್ದ, ಸಾಮರಸ್ಯ, ಸಮೃದ್ಧ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಲೋಕನಾಯಕ ಜಯಪ್ರಕಾಶ್ ನಾರಾಯಣ ವಿಚಾರ ವೇದಿಕೆ ವತಿಯಿಂದ ನಾಳೆ(ಮಾ.31) ಬೆಂಗಳೂರಿನಲ್ಲಿ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.
‘ರಾಜ್ಯದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗಿದ್ದು, ಎಲ್ಲೆಡೆ ಶಾಂತಿ ಮರುಸ್ಥಾಪನೆ ಆಶಯದಿಂದ ಈ ವಿಚಾರ ಸಂಕಿರಣವು ನಗರದ ಗಾಂಧಿ ಭವನದಲ್ಲಿ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಇದು ಸಂಪೂರ್ಣ ರಾಜಕೀಯೇತರ ಕಾರ್ಯಕ್ರಮ ಆಗಿರುತ್ತದೆ' ಎಂದು ತಿಳಿಸಲಾಗಿದೆ.
ಸುಪ್ರಸಿದ್ಧ ಕಾದಂಬರಿಕಾರ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ.ವೀರಭದ್ರಪ್ಪ ಉದ್ಘಾಟನೆ ಮಾಡಲಿದ್ದು, ಹೈಕೋರ್ಟ್‍ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನ್ ದಾಸ್, ಆದಿಚುಂಚನಗಿರಿ ಕ್ಷೇತ್ರದ ಬೆಂಗಳೂರು ಶಾಖಾ ಮಠದ ಶ್ರೀಸೌಮ್ಯನಾಥ ಸ್ವಾಮೀಜಿ, ಕೂಡಲ ಸಂಗಮದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ, ಮುಸ್ಲಿಂ ಸಮುದಾಯದ ಧರ್ಮಗುರುಗಳಾದ ಮುಫ್ತಿ ಮಹಮ್ಮದ್ ಮಿಸ್ ಬಾಯ್ ಜಮಾಲಿ ನೂರಿ, ಕ್ರೈಸ್ತ ಧರ್ಮಗುರುಗಳಾದ ಫಾದರ್ ಸಿರಿಲ್ ವಿಕ್ಟರ್ ಹಾಗೂ ಪತ್ರಕರ್ತ ಬಿ.ಎಂ. ಹನೀಫ್ ವಿಚಾರ ಸಂಕಿರಣದಲ್ಲಿ ಭಾಗಿಯಾಗಲಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.







