ಅಫ್ಘಾನ್ ನ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟು ಬಗ್ಗೆ ಚರ್ಚಿಸಲು ಬಹುರಾಷ್ಟ್ರೀಯ ಸಭೆ ನಡೆಸಲಿರುವ ಚೀನಾ

photo courtesy:twitter
ಬೀಜಿಂಗ್, ಮಾ.30: ಅಫ್ಘಾನ್ನಲ್ಲಿನ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟಿನ ಸಮಸ್ಯೆ ಮತ್ತು ಅದರ ನಿವಾರಣೆಗೆ ಪರಿಹಾರೋಪಾಯದ ಬಗ್ಗೆ ಚರ್ಚಿಸಲು ಚೀನಾದ ಟುಂಕ್ಸಿ ನಗರದಲ್ಲಿ 2 ಬಹುರಾಷ್ಟ್ರೀಯ ಸಭೆ ನಡೆಯಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನ್ನ ನೆರೆದೇಶಗಳಾದ ರಶ್ಯ, ಪಾಕಿಸ್ತಾನ, ಇರಾನ್, ತಜಿಕಿಸ್ತಾನ್, ತುರ್ಕ್ಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನದ ವಿದೇಶ ಸಚಿವರು ಪಾಲ್ಗೊಳ್ಳುವ 2 ದಿನಗಳ ಸಭೆಯಲ್ಲಿ ಅಫ್ಘಾನ್ನ ಹಂಗಾಮಿ ವಿದೇಶ ಸಚಿವ ಅಮೀರ್ಖಾನ್ ಮುತ್ತಖಿ ಕೂಡಾ ಭಾಗವಹಿಸಲಿದ್ದಾರೆ. ಚೀನಾದ ವಿದೇಶ ಸಚಿವ ವಾಂಗ್ ಯಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಇಂಡೋನೇಶ್ಯಾ ಮತ್ತು ಖತರ್ನ ಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದಾರೆ. ಅಫ್ಘಾನ್ ಶೀಘ್ರವೇ ಶಾಂತಿ, ಸ್ಥಿರತೆ ಮತ್ತು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಬೇಕು ಎಂಬುದು ನಮ್ಮ ಆಶಯವಾಗಿದೆ. ಇದೇ ಸಂದರ್ಭ ರಶ್ಯ, ಚೀನಾ ಮತ್ತು ಅಮೆರಿಕದ ವಿಶೇಷ ಪ್ರತಿನಿಧಿಗಳ ನಡುವಿನ ಸಭೆ ಏಕಕಾಲದಲ್ಲಿ ನಡೆಯಲಿದೆ . ಸಭೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿ ಅಫ್ಘಾನಿಸ್ತಾನಕ್ಕೆ ಅಮೆರಿಕದ ವಿಶೇಷ ಪ್ರತಿನಿಧಿ ಟಾಮ್ ವೆಸ್ಟ್ ಪಾಲ್ಗೊಳ್ಳಲಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಚೀನಾ, ಅಮೆರಿಕ, ರಶ್ಯ ಮತ್ತು ಪಾಕಿಸ್ತಾನ ದೇಶಗಳು ಅಫ್ಘಾನ್ ವಿಷಯದಲ್ಲಿ ಗಮನಾರ್ಹ ಪ್ರಭಾವ ಬೀರುವ ದೇಶಗಳಾಗಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ಹೇಳಿದ್ದಾರೆ





