‘ಹಲಾಲ್' ನಿಷೇಧ ವಿಚಾರ: ಚುನಾವಣೆಗೆ ಬೈಪಾಸ್ ರಸ್ತೆಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ‘ಹಲಾಲ್' ನಿಷೇಧ ವಿಚಾರದಲ್ಲಿ ಬುಧವಾರ ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು, ಈ ರೀತಿಯ ಹೊಸ ಹೊಸ ವಿವಾದಗಳ ಮೂಲಕ ಚುನಾವಣೆಗೆ ಬೈಪಾಸ್ ರಸ್ತೆಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ಹಲಾಲ್ ಬಗ್ಗೆ ಬಹುತೇಕರಿಗೆ ಅರಿವಿಲ್ಲ. ಇಸ್ಲಾಂ ಪದ್ಧತಿ ಪ್ರಕಾರ ಕೋಳಿ, ಕುರಿ, ಮೇಕೆ ವಧೆ ಮಾಡುವ ವೇಳೆ ಕತ್ತಿನ ಬಳಿ ಕತ್ತರಿಸಿ ಅದರ ರಕ್ತ ತೆಗೆದು ಆ ಮಾಂಸವನ್ನು ಸೇವನೆ ಮಾಡುತ್ತಾರೆ. ಇಸ್ಲಾಂನ ಪ್ರಕಾರ ಹಲಾಲ್ ಮಾಡದ ಮಾಂಸದಲ್ಲಿ ಕೆಟ್ಟ ರಕ್ತ ಇದ್ದರೆ ಅದು ಸೇವನೆಗೆ ಅರ್ಹವಲ್ಲ. ಹೀಗಾಗಿ ಕತ್ತಿನ ಒಂದು ಭಾಗ ಕಟ್ ಮಾಡಿ ರಕ್ತ ಎಲ್ಲ ಹೊರ ಹೋಗುವಂತೆ ಮಾಡುತ್ತಾರೆ. ಇದೊಂದು ವೈಜ್ಞಾನಿಕವಾಗಿರುವ ವಿಧಾನವನ್ನು ಧಾರ್ಮಿಕವಾಗಿ ಅಳವಡಿಸಿಕೊಂಡಿದ್ದಾರೆ. ಇದನ್ನು ಬೇರೆಯವರ ಮೇಲೆ ಅವರು ಹೇರಿಕೆ ಮಾಡಿಲ್ಲ' ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿವರಣೆ ನೀಡಿದರು.
'ಹಲಾಲ್ ಮಾಡದೇ ಇರುವ ಮಾಂಸವನ್ನು ಇಸ್ಲಾಂ ನಂಬುವವರು ಬಳಸಬಾರದು ಎಂದು ಹೇಳಿದೆ. ಹಿಂದೂಗಳು, ಮುಸ್ಲಿಮೇತರರು ಕೆಲವು ಬಾರಿ ಎಲ್ಲರನ್ನೂ ಮನೆಗೆ ಊಟಕ್ಕೆ ಆಹ್ವಾನಿಸಿದಾಗ ಹಲಾಲ್ ಮಾಡಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ‘ಹಲಾಲ್' ಮಾಡಿಸುವುದಿಲ್ಲ. ದೇವರ ಉತ್ಸವದ ವೇಳೆ ‘ಹಲಾಲ್' ಮಾಡಿಸುವುದಿಲ್ಲ. ಇದೀಗ ಚುನಾವಣೆ ಗೆಲ್ಲುವುದಕ್ಕೆ ಬಿಜೆಪಿ ಹೊಸ ಹೊಸ ವಿವಾದ ಹುಡುಕುತ್ತಿದೆ. ಚುನಾವಣೆಗೆ ಹೆದ್ದಾರಿಯಲ್ಲಿ ಹೋದರೆ ದಟ್ಟಣೆ ಜಾಸ್ತಿ ಹೀಗಾಗಿ ಬೈಪಾಸ್ ರಸ್ತೆಗಳನ್ನು ಕಂಡುಕೊಳ್ಳುತ್ತಿದ್ದು, ಇದೊಂದು ತಂತ್ರ ಅಷ್ಟೇ. ಆದರೆ, ಇಸ್ಲಾಂ ಪ್ರಕಾರ ಹಲಾಲ್ ಕ್ಷೇಮ, ಹಲಾಲ್ ಧರ್ಮ' ಎಂದು ರಮೇಶ್ ಕುಮಾರ್ ಬೆಳಕು ಚೆಲ್ಲಿದರು.







