ಚುನಾವಣೆ ಸುಧಾರಣೆ ಬಗ್ಗೆ ಚರ್ಚೆ: ಮೇಲ್ಮನೆಯಲ್ಲಿ ವಾಗ್ವಾದ

ಬೆಂಗಳೂರು, ಮಾ.30: ಚುನಾವಣೆ ಸುಧಾರಣೆ ಬಗ್ಗೆ ಕೆಳಮನೆಯಲ್ಲಿ ನಡೆಯುತ್ತಿರುವ ಚರ್ಚೆಯನ್ನು ಮೇಲ್ಮನೆಯಲ್ಲಿ ಮುಂದುವರೆಸುವ ಜಿಜ್ಞಾಸೆ ವಿಧಾನ ಪರಿಷತ್ತಿನ ಕಲಾಪದಲ್ಲಿ ತಲೆದೋರಿತ್ತು.
ಬುಧವಾರ ಕಲಾಪದಲ್ಲಿ ಪ್ರಶ್ನೋತ್ತರ ವೇಳೆಯ ಬಳಿಕ, ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ವಿಧಾನಸಭೆ ಅಧ್ಯಕ್ಷರ ಭಾಷಣದ ಪುಸ್ತಕವನ್ನು ಪರಿಷತ್ತಿಗೆ ಕಳುಹಿಸಿದ್ದಾರೆ. ರಾಷ್ಟ್ರಧ್ವಜದ ಮೇಲೆ ಯಾವುದೇ ಬರಹ ಮಾಡಿದರು ಅದು ಧ್ವಜ ಸಂಹಿತೆಗೆ ಮಾಡಿದ ಅಪಮಾನ. ಸಭಾಧ್ಯಕ್ಷರ ಪುಸ್ತಕದಲ್ಲಿ ನಿಯಮಬಾಹಿರವಾಗಿ ರಾಷ್ಟ್ರಧ್ವಜದ ಮೇಲೆ ಟಿಪ್ಪಣಿ ನಮೂದಿಸಲಾಗಿದೆ. ಧ್ವಜಕ್ಕೆ ಅಪಮಾನ ಮಾಡಿದವರಿಗೆ ಹಾಗೂ ಕಾನೂನು ಉಲ್ಲಂಘಿಸಿದವರಿಗೆ ಮೂರು ವರ್ಷ ಶಿಕ್ಷೆ ಇದೆ ಎಂದು ತಿಳಿಸಿದರು.
ಅಷ್ಟೇ ಅಲ್ಲದೆ, ಭಾಷಣದ ಪುಸ್ತಕದಲ್ಲಿ ಚುನಾವಣಾ ವ್ಯವಸ್ಥೆ ಸುಧಾರಣೆ ಬಗ್ಗೆ ಬರೆದಿದ್ದಾರೆ. ಪ್ರತಿ ಚುನಾವಣೆಯಲ್ಲಾಗುವ ವೆಚ್ಚದಲ್ಲಿ ರಾಜ್ಯಗಳನ್ನೆ ಅಭಿವೃದ್ಧಿ ಮಾಡಬಹುದಾಗಿದೆ, ನಿರೀಕ್ಷೆ ಮೀರಿ ಕೋಟಿ ಕೋಟಿ ಹಣ ವೆಚ್ಚವಾಗುತ್ತಿದೆ. ಡಿಸೆಂಬರ್‍ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‍ನ 25 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಭಾರೀ ಖರ್ಚು ನಡೆದಿದೆ. ಅದರಲ್ಲಿ ಚಿಕ್ಕ ರಾಜ್ಯ ಅಭಿವೃದ್ಧಿ ಮಾಡಬಹುದಾಗಿತ್ತು ಎಂದಿದ್ದಾರೆ.
ಈ ಮೂಲಕ ಮತ ಹಾಕಿದ ಗ್ರಾಮ ಪಂಚಾಯತ್ ಸದಸ್ಯರಿಗೆ ಮತ್ತು ಚುನಾಯಿತ ಸದಸ್ಯರಿಗೆ, ಈ ಸದನಕ್ಕೆ ಅಪಮಾನ ಮಾಡಿದ್ದಾರೆ. ಈ ಪುಸ್ತಕ ಹಂಚಿಕೆಯ ಬಗ್ಗೆ ಅಜೆಂಡಾದಲ್ಲೂ ನಮೂದು ಆಗಿಲ್ಲ. ಕೂಡಲೇ ಪುಸ್ತಕ ಹಿಂಪಡೆಯಿರಿ ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನಮ್ಮ ಕಾರ್ಯಾಲಯದಿಂದ ಸದನದಲ್ಲಿ ಪುಸ್ತಕ ಹಂಚಿಲ್ಲ ಎಂದರು.
ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಪ್ರಸ್ತಾಪಿಸಿ, ಚುನಾವಣೆ ಸುಧಾರಣೆ ಬಗ್ಗೆ ಕೆಳ ಮನೆಯಲ್ಲಿ ಚರ್ಚೆಯಾಗುತ್ತಿದ್ದಾಗ, ಇಲ್ಲಿಯೂ ಚರ್ಚೆಯಾಗಬೇಕು ಎಂಬ ಒತ್ತಾಸೆ ಇತ್ತು. ಅದು ಪ್ರಸ್ತಾಪವಾದಾಗ ವಿರೋಧ ಪಕ್ಷಗಳಿಂದ ಸಹಕಾರ ಸಿಗಲಿಲ್ಲ. ಹಾಗಾಗಿ ಕೆಳಮನೆಯಲ್ಲಿ ಸಭಾಧ್ಯಕ್ಷರ ಭಾಷಣದ ಪ್ರತಿಯನ್ನು ಇಲ್ಲಿ ಸಚೇತಕರ ಮೂಲಕ ಹಂಚಿಕೆ ಮಾಡಿದ್ದೇವೆ. ಒಂದು ವೇಳೆ ಅಜೆಂಡಾದಲ್ಲಿ ನಮೂದಿಸಿ ಭಾಷಣದ ಪ್ರತಿಯನ್ನು ಹಂಚಿದ್ದರೂ ಅದು ಲೋಪವಲ್ಲ. ಚುನಾವಣೆ ವ್ಯವಸ್ಥೆ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದರು.
ತ್ರೀವರ್ಣಧ್ವಜದ ಮೇಲೆ ಟಿಪ್ಪಣಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಲೋಪಗಳಾಗಿದ್ದರೆ ಸ್ಪಷ್ಟವಾಗಿ ಹೇಳಲಿ. ಟಿಪ್ಪಣಿ ಹಾಕುವುದರಿಂದ ತಪ್ಪಾಗುವುದಿಲ್ಲ ಎಂದು ಅವರು ಉಲ್ಲೇಖಿಸಿದರು.
ಬಳಿಕ ಬಿ.ಕೆ.ಹರಿಪ್ರಸಾದ್, ಚುನಾವಣೆ ಸುಧಾರಣೆಗೆ ನಮ್ಮ ಆಕ್ಷೇಪವಿಲ್ಲ. ಮಾನ್ಯತೆ ಪಡೆದ ರಾಷ್ಟ್ರ ಮಟ್ಟದ ಎಲ್ಲಾ ಪಕ್ಷಗಳನ್ನು ಕರೆದು ಚರ್ಚೆ ಮಾಡಲಿ. ಅದನ್ನು ಬಿಟ್ಟು ಇಲ್ಲಿರುವ ಪಕ್ಷಗಳನ್ನು ಮಾತ್ರ ಚರ್ಚೆ ನಡೆಸಿದರೆ ಅದು ಪೂರ್ಣವಾಗುವುದಿಲ್ಲ ಎಂದರು
ಇದೇ ವೇಳೆ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಮಾನ್ಯತೆ ಪಡೆದ ಪಕ್ಷಗಳೆಂದರೆ ಯಾವುವು, ಇಲ್ಲಿರುವ ಪಕ್ಷಗಳು ಮಾತ್ರ ಮಾನ್ಯತೆ ಪಡೆದಿವೆ ಎಂದರು.
ತದನಂತರ, ಹರಿಪ್ರಸಾದ್, ಸರಕಾರದ ಮುಖ್ಯಸಚೇತಕರು ಈ ಪುಸ್ತಕಗಳನ್ನು ಖುದ್ದಾಗಿ ಪುಸ್ತಕ ಹಂಚಿದ್ದಾರೆ. ಇದನ್ನು ವಾಪಾಸ್ ಪಡೆದುಕೊಳ್ಳಿ ಎಂದು ಹರಿಪ್ರಸಾದ್ ಒತ್ತಾಯಿಸಿದರು.







