ರಶ್ಯದ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಇಳಿದ ಅಮೆರಿಕ, ರಶ್ಯ ಗಗನಯಾತ್ರಿಗಳು

ವಾಷಿಂಗ್ಟನ್, ಮಾ.30: ಅಂತರಿಕ್ಷ ನಿಲ್ದಾಣದಲ್ಲಿದ್ದ ಅಮೆರಿಕದ ಒಬ್ಬ ಹಾಗೂ ರಶ್ಯದ ಇಬ್ಬರು ಗಗನಯಾತ್ರಿಗಳು ರಶ್ಯದ ಬಾಹ್ಯಾಕಾಶ ನೌಕೆ ಸೋಯುರ್ ಮೂಲಕ ಕಝಕ್ಸ್ತಾನದಲ್ಲಿ ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ ವರದಿ ಮಾಡಿದೆ.
ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ರಶ್ಯ ಮತ್ತು ಅಮೆರಿಕದ ನಡುವಿನ ಸಂಬಂಧ ಹದಗೆಟ್ಟಿದ್ದರೂ, ಅಂತರಿಕ್ಷ ಯಾನ ನಿಗದಿತ ರೀತಿಯಲ್ಲಿಯೇ ಮುಂದುವರಿದಿದೆ. ನಾಸಾದ ಮಾರ್ಕ್ ವ್ಯಾಂದ್ಹೇಯ್, ರಶ್ಯದ ಆ್ಯಂಟನ್ ಶಕಪ್ಲೆರೊವ್ ಮತ್ತು ಪೀಟರ್ ಡುಬ್ರೋವ್ ಅವರಿದ್ದ ಸೋಯುರ್ ನೌಕೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬುಧವಾರ ಬೆಳಿಗ್ಗೆ 6:45(ಅಂತರಾಷ್ಟ್ರೀಯ ಸಮಯ) ಹೊರಟಿದ್ದು ಭೂಕಕ್ಷೆ ಪ್ರವೇಶಿಸಿದ ಬಳಿಕ ಕಝಕ್ಸ್ತಾನದ ನಿಗದಿತ ಸ್ಥಳದಲ್ಲಿ 11:28 ಗಂಟೆಗೆ ಪ್ಯಾರಾಚೂಟ್ ಮೂಲಕ ನೆಲಕ್ಕೆ ಇಳಿದರು.
ಮಂಗಳವಾರ ಈ ಮೂವರು ಗಗನಯಾತ್ರಿಗಳು ಅಂತರಿಕ್ಷ ನಿಲ್ದಾಣದ ಕೀಯನ್ನು ಸಾಂಕೇತಿಕವಾಗಿ ನಾಸಾದ ಗಗನಯಾನಿ ಟಾಮ್ ಮಾರ್ಷ್ಬರ್ನ್ಗೆ ಹಸ್ತಾಂತರಿಸಿದ್ದರು. ‘ಭೂಮಿಯಲ್ಲಿ ಜನರ ಮಧ್ಯೆ ಸಮಸ್ಯೆ ಇರಬಹುದು. ಆದರೆ ಅಂತರಿಕ್ಷದಲ್ಲಿ ನಾವೆಲ್ಲಾ ಒಂದೇ ನಿಯೋಗದ ಸದಸ್ಯರು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಎಂಬುದು ಸ್ನೇಹ ಮತ್ತು ಸಹಕಾರದ ಸಂಕೇತವಾಗಿದೆ ಎಂದು ಶಕಪ್ಲೆರೊವ್ ಈ ಸಂದರ್ಭ ಹೇಳಿದರು.
55 ವರ್ಷದ ಮಾರ್ಕ್ ವ್ಯಾಂದ್ಹೇಯ್ ಅಂತರಿಕ್ಷ ನಿಲ್ದಾಣದಲ್ಲಿ ಸತತ 355 ದಿನ ಕಳೆದಿದ್ದು ಇದು ಅಮೆರಿಕದ ಹೊಸ ದಾಖಲೆಯಾಗಿದೆ. ಇದುವರೆಗೆ ಈ ದಾಖಲೆ ಸತತ 340 ದಿನವಿದ್ದ ಸ್ಕಾಟ್ ಕೆಲ್ಲಿ ಹೆಸರಲ್ಲಿತ್ತು. ಅಂತರಿಕ್ಷದಲ್ಲಿ ಅತ್ಯಧಿಕ ದಿನ ವಾಸವಿದ್ದ ವಿಶ್ವದಾಖಲೆ ರಶ್ಯದ ವಲೆರಿ ಪೊಲ್ಯಾಕೊವ್ ಹೆಸರಲ್ಲಿದೆ. ಇವರು 14 ತಿಂಗಳಿಗೂ ಅಧಿಕ ದಿನ ಅಂತರಿಕ್ಷದಲ್ಲಿದ್ದು 1995ರಲ್ಲಿ ಭೂಮಿಗೆ ವಾಪಸಾಗಿದ್ದರು.







