ಮಂಗಳೂರು ವಿವಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡನೆ

ಪ್ರಭಾಕರ ಭಟ್
ಮಂಗಳೂರು: ವಿಶ್ವ ವಿದ್ಯಾನಿಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂಘ ಪರಿವಾರದ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ "ನಾಳೆ ನಿಮ್ಮ ಹೆಂಡತಿಗೆ ಬುರ್ಖಾ ಹಾಕ್ತಾರೆ, ನಿಮಗೆ ಸುನ್ನತ್ (ಮುಂಜಿ) ಮಾಡ್ತಾರೆ ನೀವು ಒಪ್ತೀರಾ..? ಎಂಬ ಅಸಂಬದ್ಧ ಮರು ಪ್ರಶ್ನೆಯನ್ನು ಹಾಕುತ್ತಿರುವ ಸಂದರ್ಭ ಅವರ ಪಕ್ಕದಲ್ಲಿಯೇ ನಿಂತು, ತನ್ನ ನಗುವಿನ ಮೂಲಕ ಪರೋಕ್ಷವಾಗಿ ಭಟ್ಟರ ಹೇಳಿಕೆಯನ್ನು ಸಮರ್ಥಿಸಿದ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಯಡಪಡಿತ್ತಾಯರ ಸಂವಿಧಾನ ವಿರೋಧಿ ನಡೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದ.ಕ.ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದೆ.
ಕೋಮು ಸಾಮರಸ್ಯ ಹದಗೆಡುತ್ತಿರುವ ಪ್ರಸ್ತುತ ಸಂದರ್ಭಗಳಲ್ಲಿ ಭವಿಷ್ಯದಲ್ಲಿ ಸುಭಧ್ರ ಜಾತ್ಯತೀತ ಭಾರತವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಕೈಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳು, ವಿಶ್ವ ವಿದ್ಯಾನಿಲಯಗಳ ಪಾತ್ರ ಮಹತ್ತರವಾಗಿವೆ. ಆದರೆ ಜಾತ್ಯಾತೀತ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದ ವಿಶ್ವ ವಿದ್ಯಾನಿಲಯಗಳಿಗೆ ಸದಾ ಕೋಮು ದ್ವೇಷದ ವಿಷ ಕಾರುತ್ತಿರುವ, ಸರಕಾರದ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿರದ ಸಂಘ ಪರಿವಾರದ ನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಸರಕಾರಿ ವಿಶ್ವ ವಿದ್ಯಾನಿಲಯದ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಪತ್ರಿಕಾ ಸಂದರ್ಶನದ ವೇಳೆ ಅವರೊಂದಿಗೆ ನಿಂತು ಅವರು ನೀಡಿದ ಕೋಮು ಧ್ವೇಷದ ಅಸಂಬದ್ಧ ಹೇಳಿಕೆಗಳ ವೇಳೆ ನಗುತ್ತಾ, ಅವರ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸುವ ಮೂಲಕ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಯಡಪಡಿತ್ತಾಯ ಅವರು ಸಾಂವಿಧಾನಿಕ ಹುದ್ದೆಗೆ ಅಪಚಾರವೆಸಗಿದ್ದಾರೆ.
ಸಾಂವಿಧಾನಿಕ ಹುದ್ದೆಗೆ ಅಪಚಾರವೆಸಗಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಯಡಪಡಿತ್ತಾಯ ಅವರನ್ನು ತಕ್ಷಣ ದಿಂದಲೇ ಹುದ್ದೆಯಿಂದ ವಜಾಗೊಳಿಸಿ, ಪ್ರಕರಣದ ಬಗ್ಗೆ ಕೂಲಂಕುಷ ತನಿಖೆಗೆ ಆದೇಶಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದ.ಕ. ಜಿಲ್ಲಾ ಸಮಿತಿ ರಾಜ್ಯಪಾಲರನ್ನು ಆಗ್ರಹಿಸುತ್ತದೆ ಎಂದು ದ.ಕ. ಜಿಲ್ಲಾ ಸಂಚಾಲಕರಾದ ರಘು. ಕೆ. ಎಕ್ಕಾರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.