ಮಹಿಳೆಗೆ ಗೌರವ ಸಿಕ್ಕಿದಾಗ ಆರೋಗ್ಯಕರ ಸಮಾಜ ಸಾಧ್ಯ: ಡಾ. ಕುಮಾರ್

ಮಂಗಳೂರು : ಮಹಿಳೆಗೆ ಸಿಗಬೇಕಾದ ಗೌರವ ಸಿಕ್ಕಾಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗದಲ್ಲಿ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾ ದಳ ಜಿಲ್ಲಾ ಸಮಿತಿ ಆಶ್ರಯದಲ್ಲಿ ಆಯೋಜಿಸಲಾದ ಮಹಿಳಾ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ದಿನ ಆಚರಣೆಗೆ ಮಾತ್ರ ಸೀಮಿತವಾಗದೆ, ಮನೆ, ಮನಗಳಲ್ಲಿ ಆಕೆಗೆ ಗೌರವ ಸಿಕ್ಕಾಗ, ಆಕೆಯ ಸಾಮರ್ಥ್ಯವನ್ನು ಗುರುತಿಸುವ ಕಾರ್ಯ ಆದಾಗ ಇಂತಹ ಆಚರಣೆಗಳು ಸಾರ್ಥಕಾಗುತ್ತದೆ. ಪುರುಷಪ್ರಧಾನ ಸಮಾಜದಲ್ಲಿ ಮಹಿಳಾ ಸಾಮರ್ಥ್ಯವನ್ನು ಕುಂದಿಸುವ ಕಾರ್ಯ ಇಂದಿಗೂ ಮುಂದುವರಿದಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಆರೋಗ್ಯಕರ ಬದುಕು ಹಾಗೂ ಶಿಕ್ಷಣದೊಂದಿಗೆ ಕಾಯಿದೆಗಳಿಗಿಂತಲೂ ಮುಖ್ಯವಾಗಿ ಮನ ಪರಿವರ್ತನೆಯ ಮೂಲಕ ಹೃದಯದಿಂದ ಮಹಿಳೆಗೆ ಗೌರವ ದೊರಕಿದಾಗ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ತಾಯಿ, ಪತ್ನಿ ಸಹೋದರಿ, ಅತ್ತೆಯಾಗಿ ಹೆಣ್ಣನ್ನು ನೋಡಲು ಬಯಸುವ ಸಮಾಜ ಇಂದಿಗೂ ಮಗಳಾಗಿ ಒಪ್ಪಿಕೊಳ್ಳಲು ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿಲ್ಲದಿರುವುದೇ ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಕಾನೂನುಗಳ ಹೊರತಾಗಿಯೂ ಹೆಣ್ಣು ಭ್ರೂಣ ಹತ್ಯೆಯಂತಹ ಕೃತ್ಯಗಳು ನಡೆಯುತ್ತಿರುವುದಕ್ಕೆ ಕಾರಣವಾಗಿದೆ. ಈ ಬಗ್ಗೆ ಜಾಗೃತಿ, ಮನಪರಿವರ್ತನೆ ಅತ್ಯಗತ್ಯ ಎಂದವರು ಪ್ರತಿಪಾದಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಭಾಷಿಣಿ ದಿಕ್ಸೂಚಿ ಭಾಷಣ ನೀಡಿದರು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಂಧ್ಯಾ ಕೆ.ಎಸ್. ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸುಧಾಕರ ಕೆ., ಸೇವಾದಳದ ಹಿರಿಯ ನಾಯಕ ಪ್ರಭಾಕರ ಶ್ರೀಯಾನ್ ಉಪಸ್ಥಿತರಿದ್ದರು.
ಭಾರತ್ ಸೇವಾ ದಳದ ಜಿಲ್ಲಾ ಅಧ್ಯಕ್ಷ ಬಶೀರ್ ಬೈಕಂಪಾಡಿ, ಕಾರ್ಯದರ್ಶಿ ಟಿ.ಕೆ. ಸುಧೀರ್ ಸ್ವಾಗತಿಸಿದರು. ಕೇಂದ್ರ ಸಮಿತಿ ಸದಸ್ಯ ವಿ.ವಿ. ಫ್ರಾನ್ಸಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.







