ಭಾರತದಲ್ಲಿನ ತನ್ನ ಬ್ಯಾಂಕಿಂಗ್ ವ್ಯವಹಾರ ಗಣನೀಯವಾಗಿ ಕಡಿತಗೊಳಿಸಿದ ಅಮೆರಿಕಾದ ಸಿಟಿ ಬ್ಯಾಂಕ್

ಹೊಸದಿಲ್ಲಿ: ಅಮೆರಿಕಾದ ಪ್ರಮುಖ ಬ್ಯಾಂಕ್ ಆಗಿರುವ ಸಿಟಿ ಬ್ಯಾಂಕ್ ಭಾರತದಲ್ಲಿನ ತನ್ನ ವ್ಯವಹಾರಗಳನ್ನು ಗಣನೀಯವಾಗಿ ಕಡಿಮೆಗೊಳಿಸಿದೆ ಹಾಗೂ ಭಾರತವನ್ನು ತ್ಯಜಿಸಿರುವ ಅಥವಾ ಇಲ್ಲಿನ ವ್ಯವಹಾರಗಳನ್ನು ಕಡಿಮೆಗೊಳಿಸಿರುವ ಹಲವಾರು ವಿದೇಶಿ ಬ್ಯಾಂಕ್‍ಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಈಗಾಗಲೇ ಸಿಟಿ ತನ್ನ ಕನ್ಸ್ಯೂಮರ್ ಬ್ಯಾಂಕಿಂಗ್ ವ್ಯವಹಾರವನ್ನು ಆಕ್ಸಿಸ್ ಬ್ಯಾಂಕ್‍ಗೆ ರೂ 12,325 ಕೋಟಿಗೆ ಮಾರಾಟ ಮಾಡಿದೆ.
ಭಾರತದಲ್ಲಿ ತನ್ನ ಜಾಲ ವಿಸ್ತರಿಸಿರುವ ಹಾಗೂ ದೇಶೀಯ ಖಾಸಗಿ ವಲಯದ ಬ್ಯಾಂಕ್ ಒಂದನ್ನು ತನ್ನದಾಗಿಸಿರುವ ಸಿಂಗಾಪೂರ್ ಮೂಲದ ಡಿಬಿಎಸ್ ಬ್ಯಾಂಕ್ ಹೊರತುಪಡಿಸಿ ಈಗಾಗಲೇ ಹಲವು ವಿದೇಶಿ ಬ್ಯಾಂಕ್‍ಗಳು ಭಾರತದಲ್ಲಿನ ತಮ್ಮ ಚಟುವಟಿಕೆಗಳನ್ನು ವಿವಿಧ ಕಾರಣಗಳಿಗಾಗಿ ಕಡಿಮೆಗೊಳಿಸಿವೆ.
ಬಂಡವಾಳ ಸಂರಕ್ಷಿಸುವ ಉದ್ದೇಶದಿಂದ 13 ಮಾರುಕಟ್ಟೆಗಳಿಂದ ತನ್ನ ರಿಟೇಲ್ ವ್ಯವಹಾರದಿಂದ ಸಿಟಿ ಬ್ಯಾಂಕ್ ಈಗಾಗಲೇ ಹೊರಬಂದಿದೆ ಹಾಗೂ ಹೆಚ್ಚು ಆದಾಯ ಗಳಿಸುವ ಕ್ಷೇತ್ರಗಳತ್ತ ಒತ್ತು ನೀಡುವ ಇಂಗಿತ ಹೊಂದಿದೆ. ಭಾರತವನ್ನು 1902ರಲ್ಲಿ ಪ್ರವೇಶಿಸಿದ್ದ ಸಿಟಿ, ಕನ್ಸ್ಯೂಮರ್ ಬ್ಯಾಂಕಿಂಗ್ ಕ್ಷೇತ್ರವನ್ನು 1985ರಲ್ಲಿ ಪ್ರವೇಶಿಸಿತ್ತು.
2012ರಲ್ಲಿ ಪ್ರಮುಖ ಬ್ರಿಟಿಷ್ ಬ್ಯಾಂಕ್ ಆಗಿರುವ ಬಾರ್ಕ್‍ಲೇಸ್ ಭಾರತದಲ್ಲಿನ ಮೂರನೇ ಒಂದಂಶದಷ್ಟು ಶಾಖೆಗಳನ್ನು ಮುಚ್ಚಿದ್ದರೆ 2016ರಲ್ಲಿ ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ತನ್ನ ಭಾರತದಲ್ಲಿನ ಕಾರ್ಯಾಚರಣೆಯನ್ನು ನಿಲ್ಲಿಸಿತ್ತು. ಅದೇ ವರ್ಷ ರಾಯಲ್ ಬ್ಯಾಂಕ್ ಆಫ್ ಸ್ಕಾಟ್‍ಲ್ಯಾಂಡ್ ಕೂಡ ಭಾರತವನ್ನು ತೊರೆದಿತ್ತು. ಹೀಗೆ ಇನ್ನೂ ಹಲವಾರು ವಿದೇಶಿ ಬ್ಯಾಂಕ್‍ಗಳು ಈ ಪಟ್ಟಿಯಲ್ಲಿವೆ.
ಭಾರತ ಸರಕಾರದ ಹಲವು ನಿಯಮಗಳು ಹಾಗೂ ಶೇ 40ರಷ್ಟು ಸಾಲವನ್ನು ಸರಕಾರ ಸೂಚಿಸಿದ ಕ್ಷೇತ್ರಗಳಿಗೆ ನೀಡಬೇಕು ಇಲ್ಲವೇ ದಂಡ ಎದುರಿಸಬೇಕು ಎಂಬಂತಹ ನಿಯಮಗಳು ವಿದೇಶಿ ಬ್ಯಾಂಕ್‍ಗಳಿಗೆ ಅನಾನುಕೂಲ ಸೃಷ್ಟಿಸಿವೆ ಎಂದು ಹೇಳಲಾಗಿದೆ.