ಶ್ರೀಶೈಲದಲ್ಲಿ ಕರ್ನಾಟಕದ ಯುವಕನ ಹತ್ಯೆ ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ ಕರ್ನೂಲ್ ಎಸ್ಪಿ

ಫೈಲ್ ಫೋಟೊ
ಕರ್ನೂಲ್: ಇಲ್ಲಿ ನಡೆದ ಹೊಡೆದಾಟದಲ್ಲಿ ಬಾಗಲಕೋಟೆ ಮೂಲದ ಯುವಕನೋರ್ವನನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಸಾಮಾಜಿಕ ತಾಣದಾದ್ಯಂತ ಹರಿದಾಡಲು ಪ್ರಾರಂಭವಾಗಿದ್ದು, ಈ ಕುರಿತು ಇದೀಗ ಕರ್ನೂಲ್ ಜಿಲ್ಲೆಯ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಯುವಕನನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
"ಶ್ರೀಶೈಲದಲ್ಲಿ ನಡೆದ ಘರ್ಷಣೆಯಲ್ಲಿ ಬಾಗಲಕೋಟೆಯ ಓರ್ವ ವ್ಯಕ್ತಿಯು ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಇಬ್ಬರು ವ್ಯಕ್ತಿಗಳು ಪ್ರಕರಣದಲ್ಲಿ ಗಾಯಗೊಂಡಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಆರೈಕೆಯನ್ನು ನುರಿತ ತಜ್ಞರು ನಡೆಸುತ್ತಿದ್ದಾರೆ. ದಯವಿಟ್ಟು ಯಾರೂ ವದಂತಿಗಳನ್ನು ನಂಬಬಾರದು, ಕರ್ನಾಟಕದಿಂದ ಆಗಮಿಸುವ ಭಕ್ತರ ಕುರಿತು ಮುತುವರ್ಜಿ ವಹಿಸಲು ಸ್ಥಳದಲ್ಲೇ ಇರಬೇಕೆಂದು ನನ್ನಲ್ಲಿ ಸೂಚಿಸಲಾಗಿದೆ. ಕರ್ನಾಟಕದ ಕೇಡರ್ ಅಧಿಕಾರಿಯಾಗಿರುವ ನಾನು ಕರ್ನಾಟಕದಿಂದ ಆಗಮಿಸುವ ಎಲ್ಲರ ಬಗ್ಗೆಯೂ ಕಾಳಜಿ ವಹಿಸುತ್ತೇನೆ" ಎಂದು ಅವರು ಸ್ಪಷ್ಟಪಡಿಸಿದ್ದಾಗಿ ಮೂಲಗಳು ತಿಳಿಸಿವೆ.





