2022-23ನೇ ಸಾಲಿನ ಉಡುಪಿ ಜಿಲ್ಲಾ ಸಾಲ ಯೋಜನಾ ವರದಿ ಬಿಡುಗಡೆ

ಉಡುಪಿ : ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ನಬಾರ್ಡ್ ತಯಾರಿಸಿದ ೨೦೨೨-೨೩ನೇ ಸಾಲಿನ ಜಿಲ್ಲಾ ಸಾಲ ಯೋಜನಾ ವರದಿಯನ್ನು ಬುಧವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಪರಿಶೀಲನಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ ಬಿಡುಗಡೆಗೊಳಿಸಿದರು.
ಯೋಜನಾ ವರದಿಯಂತೆ ೨೦೨೨-೨೩ನೇ ಸಾಲಿನಲ್ಲಿ ಒಟ್ಟು ೧೨,೬೫೯.೨೬ ಕೋಟಿ ರೂ.ಗಳ ಸಾಲ ವಿತರಣಾ ಗುರಿಯನ್ನು ಹೊಂದಲಾಗಿದೆ. ಇವುಗಳನ್ನು ೪,೩೨,೬೬೧ಫಲಾನುಭವಿಗಳಿಗೆ ವಿತರಿಸಬೇಕಾಗಿದೆ. ಇವುಗಳಲ್ಲಿ ಶೇ.೭೬.೨೬ನ್ನು ಅಂದರೆ ೯೬೫೪.೭೦ ಕೋಟಿ ರೂ.ವನ್ನು ಆದ್ಯತಾ ರಂಗಕ್ಕೆ ಹಾಗೂ ಉಳಿದುದನ್ನು -೩೦೦೪.೫೬ ಕೋಟಿ ರೂ.ಗಳನ್ನು- ಆದ್ಯತೇತರ ವಲಯಕ್ಕೆ ಹಂಚಲು ಕ್ರಿಯಾ ಯೋಜನೆಯನ್ನು ತಯಾರಿಸಬೇಕಾಗಿದೆ. ಅಲ್ಲದೇ ಪಿಎಸ್‌ಎಲ್ ಅಡಿಯಲ್ಲಿ ಸಮಾಜದ ದುರ್ಬಲ ವರ್ಗಗಳಿಗೆ ೮೦೯.೬ ಕೋಟಿ ರೂ.ಗಳನ್ನು ತೆಗೆದಿಡ ಲಾಗಿದೆ.
ಆದ್ಯತಾ ವಲಯದಲ್ಲಿ ಕೃಷಿ ಕ್ಷೇತ್ರಕ್ಕೆ ಶೇ.೪೧ರಷ್ಟು ಅಂದರೆ ೫೨೦೧.೦೨ ಕೋಟಿ ರೂ. ಸಾಲವನ್ನು ೨,೯೮,೮೫೧ ಮಂದಿ ಫಲಾನುಭವಿಗಳಿಗೆ ನೀಡಲಾಗುತ್ತದೆ. ಇವುಗಳಲ್ಲಿ ರೈತರಿಗೆ ೨,೩೨೯.೯ ಕೋಟಿ ರೂ.ಕೃಷಿ ಸಾಲ, ಕೃಷಿ ಮೂಲಭೂತ ಸೌಕರ್ಯಗಳಿಗೆ೩೧೧.೬೯ ಕೋಟಿ ರೂ., ಕೃಷಿ ಪೂರಕ ಚಟುವಟಿಕೆಗಳಿಗೆ ೨,೫೫೯.೪೩ ಕೋಟಿ ರೂ.ಗಳ ಸಾಲವನ್ನು ನೀಡಲಾಗುತ್ತದೆ.
ಇನ್ನು ಎಂಎಸ್‌ಎಂಇ ಕ್ಷೇತ್ರಕ್ಕೆ ಒಟ್ಟು ೨,೮೭೮.೦೯ ಕೋಟಿ ರೂ. ಸಾಲವನ್ನು ಒಟ್ಟು ೨೮,೪೩೪ ಮಂದಿ ನೀಡಲು ಮೀಸಲಿಡಲಾಗಿದೆ. ಇವುಗಳಲ್ಲಿ ಖಾದಿ ಮತ್ತು ಗ್ರಾಮ ಕೈಗಾರಿಕೆ ಸೇರಿ ಅತಿ ಸಣ್ಣ ಉದ್ಯಮಗಳ ಉತ್ಪಾದನೆ ಮತ್ತು ಸೇವೆಗೆ ೨೩೧೦.೨೪ ಕೋಟಿ ರೂ., ಸಣ್ಣ ಕೈಗಾರಿಕೆಗೆ ೬೮.೫ ಕೋಟಿ ರೂ., ಮಧ್ಯಮ ಹಂತದ ಕೈಗಾರಿಕೆಗೆ ೪೯೦.೧೪ ಕೋಟಿ ರೂ., ರಫ್ತು ಸಾಲಕ್ಕೆ ೨೭೫.೧೪ ಕೋಟಿ ರೂ.ನೀಡಲಾಗುವುದು.
ಉಳಿದಂತೆ ೨೦,೭೫೪ ಮಂದಿಗೆ ೧೭೬.೩೯ ಕೋಟಿ ರೂ. ಶಿಕ್ಷಣ ಸಾಲ ನೀಡುವ ಗುರಿಯನ್ನು ಹೊಂದಲಾಗಿದೆ.೧೩,೨೬೩ ಮಂದಿಗೆ ಒಟ್ಟು ೧೦೧೨.೫೮ ಕೋಟಿ ರೂ.ಗೃಹ ಸಾಲ ನೀಡುವ ಗುರಿಯೂ ಇದೆ. ಅಲ್ಲದೇ ಸಾಮಾಜಿಕ ಮೂಲಸೌಕರ್ಯ ಅಭಿವೃದ್ಧಿಗೆ ೫೪.೧೩ ಕೋಟಿ ರೂ., ನವೀಕರಿಸಬಹುದಾದ ಇಂಧನಕ್ಕೆ ೪೬.೩೯ ಕೋಟಿ ರೂ. ಹಾಗೂ ಇತರ ವಿಭಾಗಗಳಿಗೆ ೧೦.೯೬ ಕೋಟಿ ರೂ.ಮೀಸಲಿಡಲಾಗಿದೆ. ಒಟ್ಟಾರೆಯಾಗಿ ಆದ್ಯತಾ ವಲಯದಲ್ಲಿ ೩,೭೧,೪೧೬ ಮಂದಿಗೆ ೯೬೫೪.೭೦ ಕೋಟಿ ರೂ.ವನ್ನು ಮೀಸಲಿಡಲಾಗಿದೆ.
ಸಭೆಯಲ್ಲಿ ಬೆಂಗಳೂರು ಆರ್‌ಬಿಐನ ಎಜಿಎಂ ತನು ನಂಜಪ್ಪ, ನಬಾರ್ಡ್‌ನ ಎಜಿಎಂ ಸಂಗೀತಾ ಕರ್ತಾ, ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ಪ್ರಾದೇಶಿಕ ಮ್ಯಾನೇಜರ್ ಲೀನಾ ಪಿಂಟೊ, ಕಾಳಿ ಕೆ., ಯೂನಿಯನ್ ಬ್ಯಾಂಕಿನ ಪ್ರಾದೇಶಿಕ ಮ್ಯಾನೇಜರ್ ಡಾ.ವಾಸಪ್ಪ, ಕೆ.ವಿ.ಜಿ ಬ್ಯಾಂಕಿನ ಪ್ರಾದೇಶಿಕ ಮ್ಯಾನೇಜರ್ ಸೂರ್ಯನಾರಾಯಣ ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ.ಪಿಂಜಾರ ಉಪಸ್ಥಿತರಿದ್ದರು.