ಸೋಮವಾರಪೇಟೆ: ಜೇನುಕಲ್ಲು ಬೆಟ್ಟದಲ್ಲಿ ಜಿಂಕೆ ಬೇಟೆ; ಇಬ್ಬರು ಆರೋಪಿಗಳ ಬಂಧನ

ಮಡಿಕೇರಿ ಮಾ.31 : ಮೀಸಲು ಅರಣ್ಯ ವ್ಯಾಪ್ತಿಯ ಜೇನುಕಲ್ಲು ಬೆಟ್ಟದಲ್ಲಿ ಜಿಂಕೆಯನ್ನು ಬೇಟೆಯಾಡಿದ ಆರೋಪದಡಿ ಅರಣ್ಯ ಇಲಾಖಾ ಸಿಬ್ಬಂದಿಗಳು ಇಬ್ಬರನ್ನು ಬಂಧಿಸಿದ್ದು, ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
ಯಲಕನೂರು ಹೊಸಳ್ಳಿ ಗ್ರಾಮದ ಕಾವೇರಪ್ಪ, ಹರೀಶ, ಪ್ರವೀಣ್, ಕೃಷ್ಣಪ್ಪ, ಪ್ರೇಮ್‍ನಾಥ್ ಹಾಗೂ ಮೋನಿಶ್ ಅವರುಗಳು ಬುಧವಾರ ರಾತ್ರಿ ಜೇನುಕಲ್ಲು ಬೆಟ್ಟದಲ್ಲಿ ಜಿಂಕೆಯನ್ನು ಭೇಟೆಯಾಡಿದ್ದು, ಗುರುವಾರ ಬೆಳಗ್ಗೆ ಮಾಂಸವನ್ನು ಸಾಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಸಂದರ್ಭ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಾವೇರಪ್ಪ ಹಾಗೂ ಹರೀಶ್ ನನ್ನು ಬಂಧಿಸಿದ್ದು, ಉಳಿದವರು ಪರಾರಿಯಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಆಟೋ, ಮೂರು ಬಂದೂಕು ಮತ್ತು ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರಪೇಟೆ ಎಸಿಎಫ್ ಸಿ.ಡಿ. ನೆಹರು, ಆರ್‍ಎಫ್‍ಒ ಶಮಾ ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಫಾರೆಸ್ಟರ್ ಭರತ್, ಮನು, ಗಾರ್ಡ್‍ಗಳಾದ ರಾಜಣ್ಣ, ಭೀಮಣ್ಣ, ಲೋಕೇಶ ಹಾಗು ವಾಚರ್‍ಗಳು ಭಾಗವಹಿಸಿದ್ದರು.





