ಉಡುಪಿಯ ತಾಯಿ-ಮಕ್ಕಳ ಆಸ್ಪತ್ರೆಯ ಸಮಸ್ಯೆಗೆ ಶಾಶ್ವತ ಪರಿಹಾರ: ಶಾಸಕ ರಘುಪತಿ ಭಟ್
ಉಡುಪಿ : ಕಳೆದ ಕೆಲವು ವರ್ಷಗಳಿಂದ ವಿವಿಧ ರೀತಿಯ ಸಮಸ್ಯೆಗಳಿಗೆ ತುತ್ತಾಗಿದ್ದ ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರದ ಮರು ಸುಪರ್ದಿಗೆ ಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸುವ ಮೂಲಕ ಅದರ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆತಂತಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟು ದಶಕಗಳಿಂದ ಜಿಲ್ಲೆಯ ಹಾಗೂ ಹೊರಜಿಲ್ಲೆಗಳ ಬಡಜನರಿಗೆ ಅತ್ಯುತ್ತಮ ಸೇವೆ ಸಲ್ಲಿಸುತಿದ್ದ 70 ಹಾಸಿಗೆಗಳ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಖಾಸಗಿಯವರ ನಿರ್ವಹಣೆಗೊಳಗಾದ ಬಳಿಕ ಸಮಸ್ಯೆಗೆ ಸಿಲುಕಿತ್ತು. ಆದರೆ ಇದೀಗ ಸರಕಾರ ಅದನ್ನು ತನ್ನ ವಶಕ್ಕೆ ಪಡೆದು 200 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆಯಾಗಿ ನಿರ್ವಹಿಸಲಿದೆ. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳಿಗೂ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದವರು ಹೇಳಿದರು.
ಮೊದಲಿದ್ದ 70 ಹಾಸಿಗೆಗಳ ಆಸ್ಪತ್ರೆಯೊಂದಿಗೆ ಹೆಚ್ಚುವರಿಯಾದ 130 ಹಾಸಿಗೆಗಳ ಆಸ್ಪತ್ರೆಗೆ ಬೇಕಾದ ಸಿಬ್ಬಂದಿ ನೇಮಕಕ್ಕೂ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ 103 ಹೆಚ್ಚುವರಿ ಸಿಬ್ಬಂದಿಗಳ ನೇಮಕಾತಿ ನಡೆಯಬೇಕಾಗಿದೆ ಎಂದರು.
ಆಸ್ಪತ್ರೆಯ ವಾರ್ಷಿಕ ನಿರ್ವಹಣೆಗೆ, ಖರ್ಚು ವೆಚ್ಚಗಳಿಗೆ 7 ಕೋಟಿ ರೂ.ಗಳಿಗೆ ಮಂಜೂರಾತಿ ನೀಡಲಾಗಿದೆ. ಇದರೊಂದಿಗೆ ಹೆಚ್ಚುವರಿ ಸಿಬ್ಬಂದಿಗಳ ನೇಮಕಕ್ಕೆ ಬೇಕಾದ ವಾರ್ಷಿಕ ಅನುದಾನ 2.83 ಕೋಟಿ ರೂ.ಗಳಿಗೂ ಒಪ್ಪಿಗೆ ನೀಡಲಾಗಿದೆ. ಈ ಮೂಲಕ ಒಟ್ಟಾರೆಯಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವಾರ್ಷಿಕ ನಿರ್ವಹಣೆಗೆ ಒಟ್ಟು 9.82 ಕೋಟಿ ರೂ. ಹೆಚ್ಚುವರಿ ಅನುದಾನ ಮಂಜೂರಾಗಿದೆ ಎಂದು ಭಟ್ ತಿಳಿಸಿದರು.
ಆಸ್ಪತ್ರೆಯ ಹೆಸರು ಬದಲಾವಣೆ ಇಲ್ಲ: ಆದರೆ ನಿರ್ವಹಣೆಗೆ ಸಮಸ್ಯೆ ಎದುರಿಸಿ ಆಸ್ಪತ್ರೆಯನ್ನು ಸರಕಾರಕ್ಕೆ ಬಿಟ್ಟುಕೊಟ್ಟ ಬಿ.ಆರ್.ಶೆಟ್ಟಿ ವೆಂಚೂರ್ಸ್‌ನ ಬಿ.ಆರ್.ಶೆಟ್ಟಿ ಅವರ ಕೋರಿಕೆಯಂತೆ ಆಸ್ಪತ್ರೆಯ ಹೆಸರನ್ನು ಮಾತ್ರ ‘ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ’ ಎಂದೇ ಉಳಿಸಿಕೊಳ್ಳಲಾಗುವುದು. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು.
ಬಿ.ಆರ್.ಶೆಟ್ಟಿ ಅವರು ಸುಮಾರು 100 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ಸಂಪೂರ್ಣ ಹವಾನಿಯಂತ್ರಿತ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಿಕೊಟ್ಟಿರುವುದರಿಂದ ಹೆಸರು ಹಾಗೆ ಮುಂದುವರಿಯಲಿದೆ. ಸದ್ಯ ಆಸ್ಪತ್ರೆಯಲ್ಲಿರುವ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಲ್ಲಿ ಉಳಿಸಿಕೊಂಡು ಮುಂದೆ ಸರಕಾರದ ನಿಯಮದಂತೆ ನೇಮಕಾತಿ ನಡೆಯಲಿದೆ ಎಂದರು.
ಸದ್ಯ ವಿವಿಧ ಬಾಕಿ ತೀರಿಸಲು ಐದು ಕೋಟಿ ರೂ.ಗಳ ಅಗತ್ಯವಿದೆ. ಸಿಬ್ಬಂದಿಗಳಿಗೂ ನಾಲ್ಕು ತಿಂಗಳ ವೇತನ ಬಾಕಿ ಇದೆ. ಇದಕ್ಕಾಗಿ ಐದು ಕೋಟಿ ರೂ.ಹಣ ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಶಾಸಕರು ನುಡಿದರು.
ಜಿಲ್ಲೆಗೆ 450 ಹಾಸಿಗೆಗಳ ಆಸ್ಪತ್ರೆ: ಇದೀಗ ಅಜ್ಜರಕಾಡಿನಲ್ಲಿ ಜಿಲಾಸ್ಪತ್ರೆಯನ್ನು ೨೫೦ ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆ ಗೇರಿಸಿದ್ದು, 100 ಕೋಟಿ ರೂ.ವೆಚ್ಚದ ಹೊಸ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಈ ಮೂಲಕ ಜಿಲ್ಲೆಗೆ ಈಗ 200+250 ಒಟ್ಟು 450 ಹಾಸಿಗೆಗಳ ಆಸ್ಪತ್ರೆ ದೊರೆತಂತಾಗುವುದು. ಜಿಲ್ಲಾಸ್ಪತ್ರೆಯ 11 ಎಕರೆ ಹಾಗೂ ತಾಯಿ ಮತ್ಕಳ ಆಸ್ಪತ್ರೆಯ ನಾಲ್ಕು ಎಕರೆ ಸೇರಿ ಒಟ್ಟು 15 ಎಕರೆ ಪ್ರದೇಶದಲ್ಲಿ ಈ ಆಸ್ಪತ್ರೆಗಳಿರುತ್ತವೆ.
ಮೆಡಿಕಲ್ ಕಾಲೇಜಿಗೆ ಬೇಡಿಕೆ: ಇದರಿಂದ ಜಿಲ್ಲೆಗೆ ಮೆಡಿಕಲ್ ಕಾಲೇಜೊಂ ದನ್ನು ಮಂಜೂರು ಮಾಡಲು ಒತ್ತಡ ಹೇರಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ ಒಂದು ಖಾಸಗಿ ಆಸ್ಪತ್ರೆ ಇರುವುದರಿಂದ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಲು ನಿಯಮಗಳ ತೊಂದರೆ ಎದುರಾಗುತ್ತಿದೆ. ಹೀಗಾಗಿ ಕೇಂದ್ರ ಸರಕಾರದ ಪಿಪಿಪಿ ಯೋಜನೆಯಡಿ ಕಾಲೇಜು ಮಂಜೂರು ಮಾಡುವಂತೆ ಮನವಿ ಮಾಡಿದ್ದೇವೆ ಎಂದು ರಘುಪತಿ ಭಟ್ ತಿಳಿಸಿದರು.
ಉಡುಪಿಯಿಂದ ಎಂಟು ಕಿ.ಮೀ. ದೂರದಲ್ಲಿರುವ ಕೊಳಲಗಿರಿಯಲ್ಲಿರುವ ೩೨ ಎಕರೆ ಜಾಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಲು ಪ್ರಸ್ತಾಪ ಕಳುಹಿಸಿದ್ದೇವೆ. ವಿಶೇಷ ಪರಿಗಣನೆಯಲ್ಲಿ ಜಿಲ್ಲೆಗೆ ಪ್ರತ್ಯೇಕ ವೈದ್ಯಕೀಯ ಕಾಲೇಜನ್ನು ಕೇಳಿದ್ದೇವೆ. ಪಿಪಿಪಿಯಡಿ ಇದಕ್ಕೆ ಅವಕಾಶವಿದ್ದು, ಇದಕ್ಕಾಗಿ ಡಿಪಿಆರ್ ತಯಾರಿಸಲು ಇಲಾಖೆ ಸಂಸ್ಥೆಯೊಂದನ್ನು ನೇಮಿಸಿದೆ. ಇದರ ವರದಿ ಬಂದಾಕ್ಷಣ, ಸಾರ್ವಜನಿಕವಾಗಿ ಅದನ್ನು ಎಲ್ಲರ ಗಮನಕ್ಕೆ ತರಲಾಗುವುದು ಎಂದರು.
ವಿರೋಧಿಸುತ್ತೇನೆ: ಪಿಪಿಪಿ ಮಾದರಿಯಲ್ಲಿ ಸರಕಾರಿ ಆಸ್ಪತ್ರೆಯ ಕ್ಲಿನಿಕಲ್ ಸೌಲಭ್ಯವನ್ನು ಮಾತ್ರ ಖಾಸಗಿಯವರು ನಿರ್ವಹಣೆ ಮಾಡಲಿದ್ದು, ಆಸ್ಪತ್ರೆ ಸರಕಾರದ ಸುಪರ್ದಿಯಲ್ಲೇ ಇರುತ್ತದೆ. ಒಂದು ವೇಳೆ ಪಿಪಿಪಿಯಲ್ಲಿ ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡುವುದಾದರೆ ಇದನ್ನು ತಾನು ವಿರೋದಿಸುವುದಾಗಿ ರಘುಪತಿ ಭಟ್ ನುಡಿದರು.
ಪಿಪಿಪಿಯಲ್ಲಿ ಶೇ.೫೦ರಷ್ಟು ಸೀಟುಗಳು ಸರಕಾರಕ್ಕೆ ದೊರೆಯುತ್ತದೆ. ಇದರಲ್ಲಿ ಉಡುಪಿಯವರಿಗೆ ಪ್ರತ್ಯೇಕ ಸೀಟು ದೊರೆಯದಿದ್ದರೂ, ನೀಟ್‌ನಲ್ಲಿ ತೇರ್ಗಡೆ ಗೊಂಡ ರಾಜ್ಯದ ಬಡ ಪ್ರತಿಭಾನ್ವಿತ ಮಕ್ಕಳಿಗೆ ಸೀಟು ಸಿಗುತ್ತದೆ. ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ೬೦೦ರಿಂದ ೭೦೦ ಕೋಟಿ ರೂ.ಅಗತ್ಯವಿದ್ದು, ಇದನ್ನು ಸದ್ಯದ ಪರಿಸ್ಥಿತಿಯಲ್ಲಿ ನಿಭಾಯಿಸಲು ಸಾಧ್ಯವಾಗಲಿಕ್ಕಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬಿಜೆಪಿಯ ಮುಖಂಡರಾದ ಮಹೇಶ್ ಠಾಕೂರ್, ರಾಘವೇಂದ್ರ ಕಿಣಿ, ಮನೋಹರ ಕಲ್ಮಾಡಿ ಮುಂತಾದವರು ಉಪಸ್ಥಿತರಿದ್ದರು.
ಆಸ್ಪತ್ರೆ ನೌಕರರ ಮನವಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳು ಇಂದು ಶಾಸಕರನ್ನು ಭೇಟಿಯಾಗಿ ತಮ್ಮ ಭವಿಷ್ಯದ ಕುರಿತಂತೆ ಆತಂಕವನ್ನು ವ್ಯಕ್ತಪಡಿಸಿದರು. ತಮಗೆ ಕಳೆದ ಡಿಸೆಂಬರ್ ತಿಂಗಳಿನಿಂದ ಸಂಬಳ ನೀಡಿಲ್ಲ, ಮುಂದಿನ ಭವಿಷ್ಯದ ಬಗ್ಗೆ ಆತಂಕವಿದೆ ಎಂದರು. ನಿಮಗೆ ಯಾವುದೇ ತೊಂದರೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ. ಇನ್ನೊಂದು ವಾರದಲ್ಲಿ ಈ ಬಗ್ಗೆ ಸ್ಪಷ್ಟ ಉತ್ತರ ನೀಡುತ್ತೇನೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.