ಸಂಪಾಜೆಯಲ್ಲಿ ದರೋಡೆ ಪ್ರಕರಣ: ನಾಲ್ಕು ಮಂದಿ ಆರೋಪಿಗಳ ಬಂಧನ

ಸುಳ್ಯ : ಸಂಪಾಜೆ ಗ್ರಾಮದ ಚಟ್ಟೆಕಲ್ಲಿನಲ್ಲಿ ಮನೆಗೆ ನುಗ್ಗಿ ನಗದು ಮತ್ತು ಚಿನ್ನಾಭರಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಣೆ ಋಷಿಕೇಶ್ ಭಗವಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮಿಳುನಾಡು ಮೂಲದ ಕಾರ್ತಿಕ್ (38), ನರಸಿಂಹನ್ (40), ಹಾಸನ ಮೂಲದ ಯಧುಕುಮಾರ್ (33), ದೀಕ್ಷಿತ್ (26, ಎಂಬವರನ್ನು ಬಂಧಿಸಲಾಗಿದ್ದು, ನಗದು ಹಾಗೂ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಮೊಬೈಲ್ ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದು, ಘಟನೆಗೆ ಸಂಬಂಧಿಸಿದ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳವಾದ ನಗದು ಹಣದ ಪೈಕಿ 20,000 ರೂ. ಮತ್ತು ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಹನ ಮತ್ತು 5 ಮೊಬೈಲ್ ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದ್ದು ಉಳಿದ ಆರೋಪಿಗಳ ಪತ್ತೆ ಮತ್ತು ದರೋಡೆಯಾದ ಚಿನ್ನಾಭರಣ, ನಗದು ಪತ್ತೆ ಮಾಡಲಾಗುವುದು ಎಂದು ಎಸ್‍ಪಿ ಅವರು ತಿಳಿಸಿದ್ದಾರೆ.
ಮಾ.20 ರಂದು ರಾತ್ರಿ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಚಟ್ಟೆಕಲ್ಲು ಎಂಬಲ್ಲಿರುವ ಅಂಬರೀಶ್ ಭಟ್ ಎಂಬವರ ಮನೆಗೆ ನುಗ್ಗಿ ಸುಮಾರು 1,80,000 ರೂ. ನಗದು ಮತ್ತು ಚಿನ್ನಾಭರಣ ದರೋಡೆ ಮಾಡಲಾಗಿತ್ತು.
ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಸದ್ರಿ ಪ್ರಕರಣದ ಪತ್ತೆ ಬಗ್ಗೆ ಪೊಲೀಸ್ ಅಧೀಕ್ಷಕರಾದ ಸೋನಾವಣೆ ಋಷಿಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ಅವರ ಸೂಚನೆಯಂತೆ ಪೊಲೀಸ್ ಉಪಾಧೀಕ್ಷಕರಾದ ಗಾನಾ.ಪಿ.ಕುಮಾರ್, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗಿತ್ತು.