ಬೆಂಗಳೂರಿನಲ್ಲಿ ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.31: ರಾಜಧಾನಿ ಬೆಂಗಳೂರಿನ ಹೆಬ್ಬಾಳದ ಬಳಿ ಶಾಲಾ ಬಾಲಕಿ ಅಕ್ಷಯಾ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದು ಆಕೆ ಮೃತಪಟ್ಟ ದುರ್ಘಟನೆ ಮಾಸುವ ಮುನ್ನವೇ, ಮತ್ತೆ ಅದೇ ಮಾದರಿಯಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ.
ಗುರುವಾರ ಮಧ್ಯಾಹ್ನ ಬಾಗಲೂರು ಕ್ರಾಸ್ ಬಳಿ ರೇವಾ ಕಾಲೇಜು ಬಳಿ ಬಿಬಿಎಂಪಿಯ ಕಸದ ಲಾರಿ ಢಿಕ್ಕಿ ಹೊಡೆದು ಸ್ಕೂಟರ್ ನಲ್ಲಿ ತೆರಳುತ್ತಿದ್ದ ರಾಮಯ್ಯ(60) ಎಂಬುವರು ಮೃತಪಟ್ಟಿದ್ದಾರೆ.
ಬಾಗಲೂರು ಕ್ರಾಸ್ ಬಳಿಯಿರುವ ರೇವಾ ಯೂನಿವರ್ಸಿಟಿ ಬಳಿ ಬರುವಾಗ ಹಿಂಬದಿಯಿಂದ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ರಾಮಯ್ಯ ಮೇಲೆ ಹರಿದಿದೆ ಎನ್ನಲಾಗಿದೆ. ಇದರ ಪರಿಣಾಮ ವೃದ್ಧ ರಾಮಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಬಳಿಕ ಸ್ಥಳದಿಂದ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಡಿಸಿಪಿ ಸವಿತಾ ತಿಳಿಸಿದ್ದಾರೆ.
ಸಂಪಿಗೆಹಳ್ಳಿ ನಿವಾಸಿಯಾಗಿರುವ ರಾಮಯ್ಯ, ಸಂಬಂಧಿಕರ ಮನೆ ಕಾರ್ಯಕ್ರಮದ ನಿಮಿತ್ತ ಸಾತನೂರಿಗೆ ತೆರಳಿದ್ದರು. ಸಂಪಿಗೆಹಳ್ಳಿಯ ಮನೆಗೆ ವಾಪಸ್ ತೆರಳುವಾಗ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸ್ಥಳದಲ್ಲೇ ಮೃತ್ಯು: ಇಬ್ಬರಿಗೆ ಗಂಭೀರ ಗಾಯ







