ಈಶಾನ್ಯ ಭಾರತ: ಹಲವಾರು ಸ್ಥಳಗಳಿಂದ ವಿವಾದಾತ್ಮಕ ಅಫ್‌ಸ್ಪಾ ಕಾಯ್ದೆ ಹಿಂದೆಗೆತ

ಹೊಸದಿಲ್ಲಿ,ಮಾ.31: ಈಶಾನ್ಯ ರಾಜ್ಯಗಳ ಜನರ ಬೇಡಿಕೆಯಂತೆ ದಶಕಗಳ ಬಳಿಕ ನಾಗಾಲ್ಯಾಂಡ್,ಅಸ್ಸಾಂ ಮತ್ತು ಮಣಿಪುರಗಳಲ್ಲಿ ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಫ್‌ಸ್ಪಾ) ಯಡಿಯ ಪ್ರದೇಶಗಳನ್ನು ಕಡಿಮೆಗೊಳಿಸಲಾಗಿದೆ ಎಂದು ಗೃಹಸಚಿವ ಅಮಿತ್ ಶಾ ಅವರು ಗುರುವಾರ ಪ್ರಕಟಿಸಿದ್ದಾರೆ.
ಅಸ್ಸಾಮಿನ 23 ಜಿಲ್ಲೆಗಳಿಂದ ಸಂಪೂರ್ಣವಾಗಿ ಮತ್ತು ಒಂದು ಜಿಲ್ಲೆಯಿಂದ ಭಾಗಶಃ,ಮಣಿಪುರದ ಆರು ಜಿಲ್ಲೆಗಳ 15 ಪೊಲೀಸ್ ಠಾಣೆಗಳು ಮತ್ತು ನಾಗಾಲ್ಯಾಂಡ್‌ನ ಏಳು ಜಿಲ್ಲೆಗಳ 15 ಪೊಲೀಸ್ ಠಾಣೆಗಳ ವ್ಯಾಪ್ತಿಯಿಂದ ಅಫ್‌ಸ್ಪಾವನ್ನು ಹಿಂದೆಗೆದುಕೊಳ್ಳಲಾಗಿದೆ.
ಈ ಕ್ರಮದ ಹೆಗ್ಗಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ ಶಾ,ಈಶಾನ್ಯ ಭಾರತದಲ್ಲಿ ಬಂಡಾಯವನ್ನು ಅಂತ್ಯಗೊಳಿಸಲು ಮತ್ತು ಶಾಶ್ವತ ಶಾಂತಿಯನ್ನು ಮರಳಿ ತರಲು ನಡೆಸಲಾದ ನಿರಂತರ ಪ್ರಯತ್ನಗಳು ಮತ್ತು ಹಲವಾರು ಒಪ್ಪಂದಗಳಿಂದಾಗಿ ಭದ್ರತಾ ಸ್ಥಿತಿಯು ಉತ್ತಮಗೊಂಡಿರುವುದು ಹಾಗೂ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿರುವುದು ಇದನ್ನು ಸಾಧ್ಯವಾಗಿಸಿವೆ ಎಂದು ಹೇಳಿದರು.
ಪ್ರದೇಶದ ಜನರನ್ನು ಅಭಿನಂದಿಸಿದ ಶಾ ಹಿಂದಿನ ಸರಕಾರಗಳ ವಿರುದ್ಧ ವಾಗ್ದಾಳಿಯನ್ನೂ ನಡೆಸಿದರು. ದಶಕಗಳ ಕಾಲ ಈಶಾನ್ಯ ಭಾರತವನ್ನು ನಿರ್ಲಕ್ಷಿಸಲಾಗಿತ್ತು ಮತ್ತು ಈಗ ಅದು ಶಾಂತಿ,ಸಮೃದ್ಧಿ ಮತ್ತು ಅಭೂತಪೂರ್ವ ಬೆಳವಣಿಗೆಯ ಹೊಸ ಯುಗಕ್ಕೆ ಸಾಕ್ಷಿಯಾಗುತ್ತಿದೆ ಎಂದರು.
ಈ ಮೂರು ಬಂಡಾಯ ಪೀಡಿತ ರಾಜ್ಯಗಳಿಂದ ಅಫ್‌ಸ್ಪಾವನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಲಾಗಿಲ್ಲ ಮತ್ತು ಕೆಲವು ಪ್ರದೇಶಗಳಲ್ಲಿ ಅದು ಮುಂದುವರಿಯುತ್ತದೆ ಎಂದು ಗೃಹಸಚಿವಾಲಯದ ವಕ್ತಾರರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಯಾವುದೇ ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನು ನಡೆಸಲು ಮತ್ತು ಯಾವುದೇ ಪೂರ್ವ ವಾರಂಟ್ ಇಲ್ಲದೆ ಯಾರನ್ನೂ ಬಂಧಿಸಲು ಅಫ್‌ಸ್ಪಾ ಭದ್ರತಾ ಪಡೆಗಳಿಗೆ ಅಧಿಕಾರ ನೀಡುತ್ತದೆ. ಯಾವುದೇ ಕಾರ್ಯಚರಣೆಯಲ್ಲಿ ತಪ್ಪುಗಳು ನಡೆದರೂ ಅದು ಭದ್ರತಾ ಪಡೆಗಳಿಗೆ ಕಾನೂನು ಕ್ರಮಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ‘ಪ್ರಕ್ಷುಬ್ಧ’ ಎಂದು ಸರಕಾರವು ಪರಿಗಣಿಸಿದ ಪ್ರದೇಶಗಳಲ್ಲಿ ಬಂಡಾಯವನ್ನು ಎದುರಿಸಲು ಭದ್ರತಾ ಪಡೆಗಳಿಗೆ ನೆರವಾಗಲು ಈ ಕಾಯ್ದೆಯನ್ನು ತರಲಾಗಿತ್ತು.
ಮಾನವ ಹಕ್ಕುಗಳ ಉಲ್ಲಂಘನೆಯ ಹಲವಾರು ಘಟನೆಗಳು ವರದಿಯಾಗಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರರು ಕಾಯ್ದೆಯನ್ನು ಹಿಂದೆಗೆದುಕೊಳ್ಳುವಂತೆ ದಶಕಗಳಿಂದಲೂ ಆಗ್ರಹಿಸುತ್ತಿದ್ದರು. ಕಾಯ್ದೆಯಡಿ ಅಧಿಕಾರಿಗಳನ್ನು ನಾಗರಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವಂತಿಲ್ಲ ಮತ್ತು ಸೇನೆಯ ಆಂತರಿಕ ಪ್ರಕ್ರಿಯೆಗಳು ಅಪಾರದರ್ಶಕವಾಗಿವೆ,ಹೀಗಾಗಿ ಕಾಯ್ದೆಯು ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಮತ್ತು ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗುವ ಅಧಿಕಾರಿಗಳಿಗೆ ಅಫ್‌ಸ್ಪಾ ರಕ್ಷಣೆಯನ್ನು ನೀಡುತ್ತದೆ ಎನ್ನುವುದು ಕಾಯ್ದೆಯ ಟೀಕಾಕಾರರ ವಾದವಾಗಿದೆ. ಕಾಯ್ದೆಯಡಿ ಸ್ಥಳೀಯ ಪೊಲೀಸರು ನಾಗರಿಕ ನ್ಯಾಯಾಲಯಗಳಲ್ಲಿ ಸೇನೆ ಅಥವಾ ಅರೆ ಮಿಲಿಟರಿ ಪಡೆಗಳ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲು ಕೇಂದ್ರ ಸರಕಾರದ ಪೂರ್ವಾನುಮತಿಯನ್ನು ಪಡೆಯುವುದು ಅಗತ್ಯವಾಗಿದೆ.
ಕಳೆದ ವರ್ಷದ ಡಿ.4ರಂದು ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಬಂಡಾಯ ನಿಗ್ರಹ ಕಾರ್ಯಾಚರಣೆಯಲ್ಲಿ 14 ನಾಗರಿಕರನ್ನು ಬಂಡುಕೋರರು ಎಂದು ತಪ್ಪಾಗಿ ಗ್ರಹಿಸಿ ಗುಂಡು ಹಾರಿಸಿ ಅವರನ್ನು ಹತ್ಯೆಗೈದಿದ್ದ ಘಟನೆ ಮತ್ತು ಇದಕ್ಕೆ ಪ್ರತೀಕಾರವಾಗಿ ಭುಗಿಲೆದ್ದಿದ್ದ ಹಿಂಸಾಚಾರದ ಬಳಿಕ ಅಫ್‌ಸ್ಪಾವನ್ನು ಹಿಂದೆಗೆದುಕೊಳ್ಳಬೇಕೆಂಬ ದಶಕಗಳ ಬೇಡಿಕೆ ಹೆಚ್ಚಿನ ಒತ್ತನ್ನು ಪಡೆದುಕೊಂಡಿತ್ತು.







