ಸಿ.ಎಂ. ಇಬ್ರಾಹೀಂ ನಾಯಕತ್ವದಲ್ಲಿ ಜೆಡಿಎಸ್ ಅಧಿಕಾರಕ್ಕೆ: ಕುಮಾರಸ್ವಾಮಿ

ಬೆಂಗಳೂರು, ಮಾ.31: ಸಿ.ಎಂ.ಇಬ್ರಾಹೀಂ ಅವರ ನಾಯಕತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಗುರುವಾರ ಸಂಜೆ ಇಲ್ಲಿನ ಬೆನ್ಸನ್‍ಟೌನ್‍ನಲ್ಲಿರುವ ಸಿ.ಎಂ.ಇಬ್ರಾಹೀಂ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಬ್ರಾಹೀಂ ಅವರು ದೇವೇಗೌಡರ ಕುಟುಂಬದಲ್ಲಿ ಸಹೋದರನಂತೆ ಇರುವ ನಾಯಕ. ಈ ಹಿಂದೆ ಸಣ್ಣ ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ಅಲ್ಲದೆ, ಅವರ ರಾಜಕೀಯ ಜೀವನ ಕಾಕತಾಳೀಯ. ರಾಜ್ಯದ ಉದ್ದಗಲಕ್ಕೂ ದೇವೇಗೌಡರ ಜೊತೆ ಇಬ್ರಾಹಿಂ ಪಕ್ಷಕ್ಕೆ ದುಡಿದಿದ್ದರು ಎಂದು ನುಡಿದರು.
ಬೃಹತ್ ಸಮಾವೇಶ ಮಾಡಿ ಇಬ್ರಾಹಿಂ ಸೇರ್ಪಡೆ ಕಾರ್ಯಕ್ರಮ ಆಯೋಜಿಸುತ್ತೇವೆ. ಒಂದು ಕಡೆ ರಮಝಾನ್, ಮತ್ತೊಂದು ಕಡೆ ಯುಗಾದಿ. ಇದಾದ ಬಳಿಕ ಜನತಾ ಜಲಧಾರೆ ನಡೆಸುತ್ತೇವೆ. ಇದರ ಜವಾಬ್ದಾರಿಯನ್ನು ಇಬ್ರಾಹಿಂ ಪಡೆದುಕೊಳ್ಳುತ್ತಾರೆ ಎಂದರು.
ಅವಧಿಗೂ ಮುನ್ನ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಗೆಲ್ಲುವ ವಾತಾವರಣ ಏನೂ ಇಲ್ಲ ಎಂದ ಅವರು, ಅಂದು ಬಾಬರಿ ಮಸೀದಿ ಒಡೆಯಲಾಗಿತ್ತು. ಇಂದು ದೇಶದಲ್ಲಿ ಇರುವ ಸನ್ನಿವೇಶ ಅದಕ್ಕೆ ಹೋಲಿಕೆಯಾಗುತ್ತದೆ. ಇದು ಬಿಜೆಪಿ ಉಂಟುಮಾಡಿರುವ ವಾತಾವರಣ. ಇಂದು ನಾಡಿನ ಸಾಮರಸ್ಯ ಹಾಳು ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.








