ಸರಕಾರಿ ರಂಗಮಂದಿರಗಳನ್ನು ಆನ್‍ಲೈನ್‍ನಲ್ಲಿ ಕಾಯ್ದಿರಿಸಿ: ಸಚಿವ ಸುನೀಲ್‍ಕುಮಾರ್

ಬೆಂಗಳೂರು, ಮಾ.31: ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯ, ರವೀಂದ್ರ ಕಲಾಕ್ಷೇತ್ರ, ನಯನ ರಂಗಮಂದಿರ ಮತ್ತಿತರ ಸರಕಾರಿ ರಂಗಮಂದಿರಗಳನ್ನು ಎ.1ರಿಂದ ಆನ್‍ಲೈನ್ ಮೂಲಕ ಕಾಯ್ದಿರಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‍ಕುಮಾರ್ ಹೇಳಿದ್ದಾರೆ.
ಈ ನೂತನ ವ್ಯವಸ್ಥೆಗೆ ಸಚಿವ ಸುನೀಲ್‍ಕುಮಾರ್ ಗುರುವಾರ ಚಾಲನೆ ನೀಡಿದ್ದು, ಇದೇ ವೇಳೆ ಕಲಾವಿದರ ದತ್ತಾಂಶ ಸಂಗ್ರಹ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು.
ಇದೇ ವೇಳೆ ಮಾತನಾಡಿದ ವಿ. ಸುನೀಲ್‍ಕುಮಾರ್ ಅವರು, ರವೀಂದ್ರ ಕಲಾಕ್ಷೇತ್ರದಲ್ಲಿ ಡೇಟ್ ಬ್ಲಾಕಿಂಗ್ ದಂಧೆ ನಡೆಯುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಕನ್ನಡ ಸಂಸ್ಕೃತಿ ಇಲಾಖೆಯ ವ್ಯಾಪ್ತಿಯ ಸಭಾಂಗಣಗಳನ್ನು ಕಾಯ್ದಿರಿಸಲು ಆನ್‍ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸಭಾಂಗಣಗಳನ್ನು ಕಾಯ್ದಿರಿಸುವಲ್ಲಿ ಪ್ರಭಾವಿಗಳು ಹಾಗೂ ಮಧ್ಯವರ್ತಿಗಳ ಕೈವಾಡ ಹೆಚ್ಚಳ ಆಗಿದ್ದರಿಂದ ನಿಜವಾದ ಕಲಾ ತಂಡಗಳಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ನಡೆಸಬೇಕೆಂಬ ಹೆಬ್ಬಯಕೆ ಈಡೇರುತ್ತಲೇ ಇರಲಿಲ್ಲ. ಹತ್ತಾರು ಕಾರ್ಯಕ್ರಮಗಳನ್ನು ಬೇರೆ ಬೇರೆ ಹೆಸರಿನಲ್ಲಿ ಕಾಯ್ದಿರಿಸಿಕೊಂಡು ಅನ್ಯರಿಗೆ ಹೆಚ್ಚಿನ ಮೊತ್ತಕ್ಕೆ ಸಭಾಂಗಣವನ್ನು ಬಿಟ್ಟುಕೊಡುವ ದಂಧೆ ನಡೆಯುತ್ತಿತ್ತು. ಈ ವಿಚಾರ ಸರಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಡೇಟ್ ಬ್ಲಾಕಿಂಗ್ ಹಗರಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಆನ್‍ಲೈನ್ ಮಾಡಲಾಗಿದೆ ಎಂದು ಹೇಳಿದರು.
ಒಂದೊಮ್ಮೆ ಸರಕಾರದ ನಿಯಮಗಳಿಂದ ನಿಗದಿಯಾದ ಕಾರ್ಯಕ್ರಮ ನಿಂತು ಹೋದರೆ ಹಣ ಹಿಂತಿರುಗಿಸುವ ಬದಲು ಮತ್ತೊಂದು ದಿನಾಂಕಕ್ಕೆ ಕಾರ್ಯಕ್ರಮ ಆಯೋಜಿಸುವುದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೂರು ದಿನಗಳಿಗಿಂತಲೂ ಹೆಚ್ಚಿನ ದಿನಕ್ಕೆ ಸತತವಾಗಿ ಸಭಾಂಗಣ ಕಾಯ್ದಿರಿಸುವುದಕ್ಕೆ ಇನ್ನು ಮುಂದೆ ಅವಕಾಶ ಇರುವುದಿಲ್ಲ ಎಂದು ಸಚಿವರು ವಿವರಿಸಿದರು.
ಎ.1ರಿಂದ ಕಾಯ್ದಿರಿಸಲು ಅವಕಾಶ: ಈ ಯೋಜನೆಯ ಸದುಪಯೋಗವನ್ನು 2022ರ ಮೇ 1ರಿಂದ ಆನ್‍ಲೈನ್ ವ್ಯವಸ್ಥೆಯಿಂದ ಕಲಾಕ್ಷೇತ್ರ, ಇತರೆ ರಂಗಮಂದಿರಗಳನ್ನು ಕಾಯ್ದಿರಿಸಲು ಎ.1ರಿಂದ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತಿದೆ. ಇದೇ ಆನ್‍ಲೈನ್ ಮಾದರಿಯಲ್ಲಿಯೇ ಕನ್ನಡ ಭವನದ ಆವರಣದಲ್ಲಿರುವ ನಯನ ರಂಗಮಂದಿರ, ಸಂಸ ಬಯಲು ರಂಗಮಂದಿರ ಹಾಗೂ ಕಲಾಗ್ರಾಮದ ನೂತನ ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಮಹಿಳಾ ವಿಶ್ರಾಂತಿ ಕೊಠಡಿ ಮತ್ತು ಆರ್ಟ್ ಗ್ಯಾಲರಿಗೂ ಅನ್ವಯವಾಗಲಿದೆ. ಮುಂದಿನ ದಿನಗಳಲ್ಲಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲ ಜಿಲ್ಲಾ ರಂಗಮಂದಿರಗಳಿಗೂ ಈ ಆನ್‍ಲೈನ್ ವ್ಯವಸ್ಥೆಯನ್ನೇ ಜಾರಿಗೊಳಿಸಲಾಗುವುದು.
ಈ ವ್ಯವಸ್ಥೆಯನ್ನು ಬಳಸಿಕೊಳ್ಳಲು ವೆಬ್‍ಸೈಟ್: http://www.rangamandira.karnataka.gov.in ಗೆ ಭೇಟಿ ನೀಡಬಹುದು.
ಕಲಾವಿದರ ದತ್ತಾಂಶ ಸಂಗ್ರಹ ಅಭಿಯಾನ: ಈವರೆಗೆ ರಾಜ್ಯದ ಸಾಹಿತಿ, ಕಲಾವಿದರ ಕುರಿತಾದ ನಿಖರವಾದ ಮಾಹಿತಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿರಲಿಲ್ಲ. ಹೀಗಾಗಿ ಇಲಾಖೆಯಿಂದ ಕಲಾವಿದರ ದತ್ತಾಂಶ ಸಂಗ್ರಹ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಸುನೀಲ್‍ಕುಮಾರ್ ತಿಳಿಸಿದರು.
ಕಲಾವಿದರು, ಸಾಹಿತಿಗಳ ಹೆಸರು, ವಿಳಾಸ, ವಯಸ್ಸು, ಕಲಾ ಪ್ರಕಾರದಲ್ಲಿ ಸಲ್ಲಿಸಿರುವ ಸೇವಾ ಅವಧಿ, ಮಾಡಿರುವ ಸಾಧನೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ದತ್ತಾಂಶ ರೂಪದಲ್ಲಿ ಸಂಗ್ರಹ ಮಾಡುವ ಕಾರ್ಯ ಇದಾಗಿದೆ. ಸೇವಾ ಸಿಂಧು ವೆಬ್ ಪೋರ್ಟಲ್ ಮುಖಾಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಹಿತಿ/ಕಲಾವಿದರ ದತ್ತಾಂಶ ಸಂಗ್ರಹ ವಿಭಾಗಕ್ಕೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಅಗತ್ಯ ಮಾಹಿತಿ ವಿವರಗಳನ್ನು ಭರ್ತಿ ಮಾಡಬಹುದು. ದತ್ತಾಂಶ ಮಾಹಿತಿ ವಿವರಗಳನ್ನು ಇಲಾಖೆಯ ಅಧೀನಕ್ಕೆ ಬರುವ ನಾನಾ ಅಕಾಡಮಿಗಳ ಅಧ್ಯಕ್ಷರು/ರಿಜಿಸ್ಟ್ರಾರ್ ಮತ್ತು ಸದಸ್ಯರನ್ನು ಒಳಗೊಂಡ ಸಮಿತಿ ಮೂಲಕ ಪರಿಶೀಲಿಸಿ ಅರ್ಹ ಸಾಹಿತಿ/ಕಲಾವಿದರ ಮಾಹಿತಿಯನ್ನು ಸಂಗ್ರಹಿಸಲಾಗುವುದು.
ಸಾಹಿತಿ/ಕಲಾವಿದರ ದತ್ತಾಂಶ ಸಂಗ್ರಹಣೆಯ ಜಾಲತಾಣ ಎ.1ರಂದು ಮುಕ್ತವಾಗಲಿದೆ. ದತ್ತಾಂಶ ಕಾರ್ಯ ಪೂರ್ಣಗೊಂಡ ನಂತರ ಗುರುತಿನ ಚೀಟಿ ನೀಡಲಾಗುವುದು. ಈ ಯೋಜನೆಯ ಸದುಪಯೋಗವನ್ನು ಸಾಹಿತಿ, ಕಲಾವಿದರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ರಂಗಮಂದಿರಗಳ ಬಾಡಿಗೆ ಹೆಚ್ಚೇನು ಮಾಡಿಲ್ಲ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸುತ್ತಿರುವ ರವೀಂದ್ರ ಕಲಾಕ್ಷೇತ್ರ, ನಯನ ಸೇರಿದಂತೆ ಇತರೆ ರಂಗಮಂದಿರಗಳ ಬಾಡಿಗೆ ತೀರಾ ದುಬಾರಿಯೇನೂ ಮಾಡಿಲ್ಲ. ರವೀಂದ್ರ ಕಲಾಕ್ಷೇತ್ರಕ್ಕೆ ಅರ್ಧ ದಿನಕ್ಕೆ 12 ಸಾವಿರ, ಪೂರ್ತಿ ದಿನಕ್ಕೆ 24 ಸಾವಿರ ರೂ. ಮಾತ್ರ ಇದೆ. ಇದರಲ್ಲಿ 5 ಸಾವಿರ ರೂ. ಠೇವಣಿಯನ್ನು ವಾಪಸ್ ನೀಡಲಾಗುವುದು. ಜತೆಗೆ ಜಿಎಸ್‍ಟಿ ಶುಲ್ಕ, ನಿರ್ವಹಣೆ ಶುಲ್ಕ ಎಲ್ಲವೂ ಸೇರಿಕೊಳ್ಳುತ್ತಿದೆ. ಹೀಗಾಗಿ ನಮ್ಮ ಕಲಾಕ್ಷೇತ್ರದ ಸುತ್ತಮುತ್ತ ಇರುವ ಖಾಸಗಿ ಸಭಾಂಗಣಗಳಿಗೆ ಹೋಲಿಸಿದರೆ ನಾವು ಮಾಡಿರುವುದು ಕೇವಲ ಶೇ.10-20ರಷ್ಟು ಮಾತ್ರ ಎಂದು ಸಚಿವ ಸುನೀಲ್‍ಕುಮಾರ್ ಸಮರ್ಥಿಸಿಕೊಂಡರು.







