ಅವಿವಾಹಿತ ಮಗಳು ತನ್ನ ಪೋಷಕರಿಂದ ಮದುವೆಯ ವೆಚ್ಚವನ್ನು ಪಡೆಯಬಹುದು: ಛತ್ತೀಸ್ಗಡ ಹೈಕೋರ್ಟ್

Photo: Twitter/@barandbench
ರಾಯಪುರ,ಮಾ.31: ಅವಿವಾಹಿತ ಪುತ್ರಿಯೋರ್ವಳು ಹಿಂದು ದತ್ತುಸ್ವೀಕಾರಗಳು ಮತ್ತು ಜೀವನಾಂಶ ಕಾಯ್ದೆ,1956ರಡಿ ತನ್ನ ಪೋಷಕರಿಂದ ಮದುವೆಯ ವೆಚ್ಚವನ್ನು ಪಡೆಯಬಹುದು ಎಂದು ಛತ್ತೀಸ್ಗಡ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.
ಛತ್ತೀಸ್ಗಡದ ದುರ್ಗ ಜಿಲ್ಲೆಯ ನಿವಾಸಿ ರಾಜೇಶ್ವರಿ (35) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಈ ತೀರ್ಪನ್ನು ಪ್ರಕಟಿಸಿದೆ.
ರಾಜೇಶ್ವರಿ ಸಲ್ಲಿಸಿದ್ದ ಅರ್ಜಿಯನ್ನು ಮಾ.21ರಂದು ಅಂಗೀಕರಿಸಿದ ಉಚ್ಚ ನ್ಯಾಯಾಲಯವು,ಸದ್ರಿ ಕಾಯ್ದೆಯ ಕಲಂ 3(ಬಿ)(ii )ರಡಿ ಅವಿವಾಹಿತ ಪುತ್ರಿ ಪೋಷಕರಿಂದ ತನ್ನ ಮದುವೆಯ ವೆಚ್ಚವನ್ನು ಪಡೆಯಬಹುದು ಎನ್ನುವುದನ್ನು ಒಪ್ಪಿಕೊಂಡಿದೆ ಎಂದು ಅವರ ಪರ ವಕೀಲ ಎ.ಕೆ.ತಿವಾರಿ ತಿಳಿಸಿದರು.
ದುರ್ಗದ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು 2016,ಎ.22ರಂದು ಹೊರಡಿಸಿದ್ದ ಆದೇಶವನ್ನು ತಳ್ಳಿಹಾಕಿರುವ ಉಚ್ಚ ನ್ಯಾಯಾಲಯವು,1956ರ ಕಾಯ್ದೆಯ ಕಲಂ 3(ಬಿ)(ii )ರಡಿ ನ್ಯಾಯನಿರ್ಣಯಕ್ಕಾಗಿ ಪ್ರಕರಣವನ್ನು ಕುಟುಂಬ ನ್ಯಾಯಾಲಯಕ್ಕೆ ಮರಳಿಸಿದೆ. ಕುಟುಂಬ ನ್ಯಾಯಾಲಯಕ್ಕೆ ಹಾಜರಾಗುವಂತೆ ಉಭಯ ಕಕ್ಷಿಗಳಿಗೆ ಅದು ಸೂಚಿಸಿದೆ.
ಭಿಲಾಯಿ ಉಕ್ಕು ಸ್ಥಾವರದ ಉದ್ಯೋಗಿ ಭಾನುರಾಮ ಪುತ್ರಿ ರಾಜೇಶ್ವರಿ ಹಿಂದು ದತ್ತು ಸ್ವೀಕಾರಗಳು ಮತ್ತು ಜೀವನಾಂಶ ಕಾಯ್ದೆ,1956ರಡಿ ದುರ್ಗ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿ ಮದುವೆ ವೆಚ್ಚಗಳ ರೂಪದಲ್ಲಿ ತನಗೆ ಜೀವನಾಂಶವಾಗಿ 20 ಲ.ರೂ.ಗಳನ್ನು ನೀಡಬೇಕು ಎಂದು ಹಕ್ಕು ಮಂಡಿಸಿದ್ದರು.
ಪುತ್ರಿಯೋರ್ವಳು ತನ್ನ ಮದುವೆಯ ವೆಚ್ಚವನ್ನು ಪಡೆದುಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದ ಕುಟುಂಬ ನ್ಯಾಯಾಲಯವು 2016,ಜ.7ರಂದು ಅರ್ಜಿಯನ್ನು ವಜಾಗೊಳಿಸಿತ್ತು.
ತನ್ನ ತಂದೆ ಭಾನುರಾಮ ಉದ್ಯೋಗದಿಂದ ನಿವೃತ್ತರಾಗಲಿದ್ದು,ಸುಮಾರು 55 ಲ.ರೂ.ಗಳಷ್ಟು ನಿವೃತ್ತಿ ಹಣವನ್ನು ಪಡೆಯಲಿದ್ದಾರೆ. ಹೀಗಾಗಿ ಅವರ ನಿವೃತ್ತಿ ಹಣದಲ್ಲಿ 20 ಲಕ್ಷ ರೂ.ಗಳನ್ನು ತನಗೆ ಬಿಡುಗಡೆಗೊಳಿಸಲು ಭಿಲಾಯಿ ಉಕ್ಕು ಸ್ಥಾವರಕ್ಕೆ ಸೂಕ್ತ ಆದೇಶವನ್ನು ಹೊರಡಿಸಬೇಕು ಎಂದು ರಾಜೇಶ್ವರಿ ಅರ್ಜಿಯಲ್ಲಿ ಕೋರಿದ್ದರು.







