ಎ.1: ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಮೌನ ಪಾದಯಾತ್ರೆ
ಉಡುಪಿ : ನಾಡಿನ ಖ್ಯಾತನಾಮ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಅವರ ನೇತೃತ್ವದಲ್ಲಿ ಉಡುಪಿಯ ಕರಾವಳಿ ಯೂತ್ ಕ್ಲಬ್ ಎ.1ನೇ ಶುಕ್ರವಾರದಂದು ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜೊಂದನ್ನು ಮಂಜೂರುಗೊಳಿಸಬೇಕೆಂದು ಸರಕಾರವನ್ನು ಆಗ್ರಹಿಸಿ ಮೌನ ಪಾದಯಾತ್ರೆ ಕೈಗೊಳ್ಳಲಿದೆ.
ಎ.1ರಂದು ಬೆಳಗ್ಗೆ 8 ಗಂಟೆಗೆ ಮಲ್ಪೆಯ ಗಾಂಧಿ ಪ್ರತಿಮೆ ಬಳಿಯಿಂದ ಪ್ರಾರಂಭಗೊಳ್ಳುವ ಪಾದಯಾತ್ರೆ, ಮಲ್ಪೆ ಪೋಲಿಸ್ ಠಾಣೆಯ ಎದುರಿನಿಂದ ಮಲ್ಪೆ ಬಸ್‌ನಿಲ್ದಾಣದ ಮುಖಾಂತರ ಕಲ್ಮಾಡಿ-ಅದಿ ಉಡುಪಿ- ಕರಾವಳಿ ಬೈಪಾಸ್ - ಬನ್ನಂಜೆ- ಉಡುಪಿ ಸಿಟಿ ಬಸ್‌ನಿಲ್ದಾಣ- ಕುಂಜುಬೆಟ್ಟು- ಇಂದ್ರಾಳಿ- ಮಣಿಪಾಲ ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಡಿ.ಸಿ.ಕಚೇರಿ ಮಾರ್ಗದಲ್ಲಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಮುಕ್ತಾಯಗೊಳ್ಳಲಿದೆ.
ಬಳಿಕ ಜಿಲ್ಲಾಧಿಕಾರಿಗಳು, ಶಾಸಕರು ಮತ್ತು ಸಂಸತ್ ಸದಸ್ಯೆ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು. ಇದರೊಂದಿಗೆ ಮುಂದಿನ ಹೋರಾಟದ ರೂಪುರೇಷೆ ಹಾಗೂ ಜಿಲ್ಲಾದ್ಯಂತ ಹೋರಾಟದ ನಿರ್ಣಯ ಕೈಗೊಳ್ಳುತ್ತೇವೆ ಎಂದು ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಗಾಗಿ ಅಭಿಯಾನವನ್ನೇ ಪ್ರಾರಂಭಿ ಸಿರುವ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.
‘ನಮ್ಮ ಪಾದಯಾತ್ರೆ ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಸರಕಾರವನ್ನು ವಿನಂತಿಸುವುದು ಮಾತ್ರವಾಗಿರುತ್ತದೆ.ಈ ಪಾದಯಾತ್ರೆ ಯಾವುದೇ ರಾಜಕೀಯ ಹಿತಾಸಕ್ತಿಯನ್ನು ಹೊಂದಿಲ್ಲ. ರಾಜಕೀಯ ಪ್ರೇರಿತವೂ ಅಲ್ಲ. ಉಡುಪಿಯ ಸಮಸ್ತ ನಾಗರಿಕರ ಪರವಾಗಿ ಈ ಪಾದಯಾತ್ರೆ ನಡೆಯಲಿದ್ದು, ಆಸಕ್ತ ನಾಗರಿಕರು ನಮ್ಮ ಪಾದಯಾತ್ರೆಯಲ್ಲಿ ಭಾಗವಹಿಸಬಹುದು.’ ಎಂದು ಅವರು ತಿಳಿಸಿದ್ದಾರೆ.
ಆಸಕ್ತರು ಕರಾವಳಿ ವೃತ್ತ, ಉಡುಪಿ ಸಿಟಿ ಬಸ್ಸು ನಿಲ್ದಾಣ ಅಥವಾ ಎಂಜಿಎಂ ಕಾಲೇಜುಗಳ ಸಮೀಪದಿಂದ ಪಾದಯಾತ್ರೆಯನ್ನು ಸೇರಿಕೊಳ್ಳಬಹುದು ಎಂದು ಡಾ.ಪಿ.ವಿ.ಭಂಡಾರಿ ಹಾಗೂ ಕರಾವಳಿ ಯೂತ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.







