ಮಧ್ಯಪ್ರದೇಶ: ದೇವಸ್ಥಾನದಲ್ಲಿ ಬೃಹತ್ ಘಂಟೆಯನ್ನು ಸ್ಥಾಪಿಸಲು ನೆರವಾದ ಮುಸ್ಲಿಮ್ ಮೆಕ್ಯಾನಿಕ್
![ಮಧ್ಯಪ್ರದೇಶ: ದೇವಸ್ಥಾನದಲ್ಲಿ ಬೃಹತ್ ಘಂಟೆಯನ್ನು ಸ್ಥಾಪಿಸಲು ನೆರವಾದ ಮುಸ್ಲಿಮ್ ಮೆಕ್ಯಾನಿಕ್ ಮಧ್ಯಪ್ರದೇಶ: ದೇವಸ್ಥಾನದಲ್ಲಿ ಬೃಹತ್ ಘಂಟೆಯನ್ನು ಸ್ಥಾಪಿಸಲು ನೆರವಾದ ಮುಸ್ಲಿಮ್ ಮೆಕ್ಯಾನಿಕ್](https://www.varthabharati.in/sites/default/files/images/articles/2022/03/31/330122-1648744637.jpg)
Photo Courtesy: ANI
ಭೋಪಾಲ,ಮಾ.31: ಕೇವಲ ಮೂರನೇ ತರಗತಿಗೇ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡಿದ್ದ ಮುಸ್ಲಿಮ್ ಮೆಕ್ಯಾನಿಕ್ ನಾರು ಖಾನ್ ಮೇವ್ (66) ಅವರು ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ಪಶುಪತಿನಾಥ ದೇವಸ್ಥಾನದ ಆವರಣದಲ್ಲಿ 3,700 ಕೆ.ಜಿ.ಭಾರದ ಮಹಾ ಘಂಟೆಯನ್ನು ಅಳವಡಿಸಿದ್ದಾರೆ. ಸಣ್ಣ ಫ್ಯಾಕ್ಟರಿಯೊಂದನ್ನು ನಡೆಸುತ್ತಿರುವ ಖಾನ್ 10-15 ದಿನಗಳಲ್ಲಿ ಈ ಕಠಿಣ ಕೆಲಸವನ್ನು ಸಂಪೂರ್ಣ ಉಚಿತವಾಗಿ ಪೂರ್ಣಗೊಳಿಸಿದ್ದಾರೆ. ಅಹ್ಮದಾಬಾದ್ ನಲ್ಲಿ ತಯಾರಾದ ಈ ಬೃಹತ್ ಘಂಟೆಯು ಕಳೆದ ಎರಡು ವರ್ಷಗಳಿಂದಲೂ ಸ್ಥಾಪನೆಗಾಗಿ ಕಾಯುತ್ತಿತ್ತು.
ಕಡಿಮೆ ಅವಧಿಯಲ್ಲಿ ದೇವಸ್ಥಾನದ ಆವರಣದಲ್ಲಿ ಮಹಾ ಘಂಟೆಯನ್ನು ಅಳವಡಿಸಿರುವ ಖಾನ್ ಅವರ ಪ್ರಯತ್ನಗಳನ್ನು ಪ್ರಶಂಸಿಸಿರುವ ಜಿಲ್ಲಾಧಿಕಾರಿ ಗೌತಮ ಸಿಂಗ್ ಅವರು,ಮಂದಸೌರ್ ಮತ್ತು ನೆರೆಯ ಜಿಲ್ಲೆಗಳಲ್ಲಿಯ ಕುಟುಂಬಗಳು ದೇಣಿಗೆಯಾಗಿ ನೀಡಿದ್ದ ಲೋಹದ ತುಂಡುಗಳನ್ನು ಬಳಸಿ ಗುಜರಾತಿನಲ್ಲಿ ಈ ಮಹಾ ಘಂಟೆಯನ್ನು ತಯಾರಿಸಲಾಗಿದೆ.
ದೇವಸ್ಥಾನದ ಆವರಣದಲ್ಲಿ ಅತ್ಯಂತ ಸೂಕ್ತ ಸ್ಥಳದಲ್ಲಿ ಅದನ್ನು ಅಳವಡಿಸಿರುವ ಖಾನ್ ಪ್ರಯತ್ನಗಳಿಗೆ ನಾವು ಋಣಿಯಾಗಿದ್ದೇವೆ. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರು ಈ ಮಹಾ ಘಂಟೆಯನ್ನು ಭಕ್ತರಿಗೆ ಸಮರ್ಪಿಸಲಿದ್ದಾರೆ ಎಂದು ತಿಳಿಸಿದರು.
ದೇಣಿಗೆಯಾಗಿ ನೀಡಲಾಗಿದ್ದ ಹಿತ್ತಾಳೆ ಮತ್ತು ತಾಮ್ರದ ತುಂಡುಗಳಿಂದ ಮಹಾ ಘಂಟೆಯನ್ನು ನಿರ್ಮಿಸಲಾಗಿದೆ. ನಾರು ಭಾಯಿ ತನ್ನ ಜನರೊಂದಿಗೆ ಘಂಟೆಯನ್ನು ದೇವಸ್ಥಾನಕ್ಕೆ ಸಾಗಿಸಿ ಭದ್ರವಾದ ಬುನಾದಿಯ ಮೇಲೆ ಸ್ಥಾಪಿಸುವ ಕಠಿಣ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಈ ಬುನಾದಿಯು ಮಹಾ ಘಂಟೆಯ ಮೂರು ಪಟ್ಟು ಭಾರವನ್ನು ತಾಳಿಕೊಳ್ಳುವಷ್ಟು ಸದೃಢವಾಗಿದೆ ಎಂದು ಪಶುಪತಿನಾಥ ದೇವಸ್ಥಾನದ ಮುಖ್ಯಸ್ಥ ದಿನೇಶ್ ನಾಗರ್ ತಿಳಿಸಿದರು.
ಅಷ್ಟಮುಖಿ ಶಿವಲಿಂಗವನ್ನು ಹೊಂದಿರುವ ಬಹುಶಃ ವಿಶ್ವದ ಏಕೈಕ ಮಂದಿರವಾಗಿರುವ ಪಶುಪತಿನಾಥ ದೇವಸ್ಥಾನದೊಂದಿಗೆ ನಾರು ಖಾನ್ ಅವರ ಸಂಬಂಧ ಹೊಸದೇನಲ್ಲ. ಮೊದಲ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಅವರು ದೇವಸ್ಥಾನದಲ್ಲಿ ಸ್ಯಾನಿಟೈಜೇಷನ್ ಯಂತ್ರವನ್ನು ಅಳವಡಿಸಿದ್ದರು ಮತ್ತು ಎರಡನೇ ಲಾಕ್ಡೌನ್ ಸಂದರ್ಭದಲ್ಲಿ ಭಕ್ತರ ಸ್ಪರ್ಶವಿಲ್ಲದೆ ಮೊಳಗುವ, ಸೆನ್ಸಾರ್ ಹೊಂದಿದ್ದ ಗಂಟೆಯನ್ನು ಅಳವಡಿಸಿದ್ದರು.