ರಾಜಕೀಯ ಹಿಂದುಳಿದಿರುವಿಕೆ ಅಧ್ಯಯನಕ್ಕೆ ಆಯೋಗ ರಚಿಸಲು ಸರ್ವಪಕ್ಷ ಸಭೆ ತೀರ್ಮಾನ
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಮೀಸಲಾತಿ

photo: @siddaramaiah
ಬೆಂಗಳೂರು, ಮಾ. 31: ‘ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದು ಹಾಗೂ ಒಬಿಸಿ ಸಮುದಾಯಗಳು ರಾಜಕೀಯ ಹಿಂದುಳಿದಿರುವಿಕೆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಆಯೋಗವೊಂದನ್ನು ರಚಿಸಬೇಕೆಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಗಿದೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧದ ಸರ್ವಪಕ್ಷ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಹಿಂದುಳಿದವರಿಗೆ ಜಿಲ್ಲಾ, ತಾಲೂಕು ಪಂಚಾಯ್ತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಿದ ಚುನಾವಣೆ ನಡೆಸುವ ಬಗ್ಗೆ ಚರ್ಚೆ
ನಡೆಸಿ ಸುಪ್ರೀಂ ಕೋರ್ಟ್ನ ತೀರ್ಪಿನಂತೆ ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆ ಬಗ್ಗೆ ವರದಿ ಪಡೆಯಲು ಆಯೋಗವನ್ನು ರಚಿಸುವ ತೀರ್ಮಾನ ಕೈಗೊಳ್ಳಲಾಯಿತು' ಎಂದು ಎಂದರು.
‘ಸುಪ್ರೀಂ ಕೋರ್ಟ್ ನಿರ್ದಿಷ್ಟ ಅಂಕಿ-ಅಂಶಗಳನ್ನು ಇಟ್ಟುಕೊಂಡು ರಾಜಕೀಯವಾಗಿ ಹಿಂದುಳಿದಿರುವಿಕೆ ಬಗ್ಗೆ ಖಚಿತಪಡಿಸಿಕೊಂಡು ಹಿಂದುಳಿದ ವರ್ಗದವರಿಗೆ ಚುನಾವಣಾ ಮೀಸಲಾತಿ ನೀಡಬೇಕು ಎಂದು ಹೇಳಿದೆ. ಹೀಗಾಗಿ ರಾಜಕೀಯ ಹಿಂದುಳಿದಿರುವಿಕೆ ಬಗ್ಗೆ ವರದಿ ಪಡೆಯಲು ಆಯೋಗವನ್ನು ರಚಿಸುವ ತೀರ್ಮಾನ ಕೈಗೊಳ್ಳಲಾಗಿದೆ' ಎಂದು ಅವರು ಹೇಳಿದರು.
‘ಸುಪ್ರೀಂ ಕೋರ್ಟ್ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಿರಬಾರದು ಎಂದು ಹೇಳಿದೆ. ಒಂದು ವೇಳೆ ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಿದರೆ ಅದನ್ನು ರದ್ದು ಮಾಡುತ್ತೇವೆ ಎಂದು ಹೇಳಿದೆ. ಅದರಂತೆ ಮಹಾರಾಷ್ಟ್ರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಚುನಾವಣೆಗಳನ್ನು ನ್ಯಾಯಾಲಯ ರದ್ದು ಮಾಡಿದೆ. ಹೀಗಾಗಿ ಪುರಸಭೆ, ನಗರಸಭೆ, ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗಳಿಗೆ ಹೋಗಬೇಕಿತ್ತು.
ಆದರೆ ಈ ಚುನಾವಣೆಗಳಿಗೆ ಹಿಂದುಳಿದ ವರ್ಗದವರಿಗೆ ಚುನಾವಣಾ ಮೀಸಲಾತಿ ಇಲ್ಲದೆ ಚುನಾವಣೆಗಳಿಗೆ ಹೋಗಲು ಸರಕಾರಕ್ಕೆ ಮನಸ್ಸಿಲ್ಲ. ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಲೇಬೇಕು ಎಂಬುದು ಸರಕಾರದ ಬಯಕೆಯಾಗಿರುವುದರಿಂದ ಹಿಂದುಳಿದ ವರ್ಗಗಳನ್ನು ಗುರುತಿಸುವ ಕ್ರಿಯೆಯನ್ನು ನಡೆಸಲು ಒಂದು ಆಯೋಗವನ್ನು ರಚಿಸಿ, ಕೆಲವು ನಿಬಂಧನೆ ವಿಧಿಸಿ ಕಾಲ ಮಿತಿಯೊಳಗೆ ವರದಿ ನೀಡಲು ಕ್ರಮ ಕೈಗೊಳ್ಳಲಾಗುವುದು' ಎಂದು ಅವರು ಹೇಳಿದರು.
‘ಸುಪ್ರೀಂ ಕೋರ್ಟ್ ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಖಚಿತಪಡಿಸಿಕೊಂಡು ಚುನಾವಣಾ ಮೀಸಲಾತಿ ನೀಡಬೇಕು ಎಂದು ಹೇಳಿದೆ. ಹಾಗೆಯೇ ಇಂದಿರಾ ಸಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಶೇ.50ಕ್ಕೂ ಹೆಚ್ಚು ಪ್ರಮಾಣದ ಮೀಸಲಾತಿಯನ್ನು ನೀಡಲು ಸಾಧ್ಯವೇ ಎಂಬ ಬಗ್ಗೆಯೂ ಅಡ್ವೊಕೇಟ್ ಜನರಲ್ ಅವರಿಂದ ವರದಿ ಪಡೆಯಲು ತೀರ್ಮಾನಿಸಲಾಗಿದೆ. ಅದರಂತೆ ಆಯೋಗದ ವರದಿ ಮತ್ತು ಅಡ್ವೊಕೇಟ್ ಜನರಲ್ ವರದಿ ಎರಡನ್ನೂ ಪಡೆದು ಹಿಂದುಳಿದ ವರ್ಗಗಳಿಗೆ ಚುನಾವಣಾ ಮೀಸಲಾತಿ ಒದಗಿಸಿ ಚುನಾವಣೆ ನಡೆಸುವ ತೀರ್ಮಾನವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
‘ಈ ವರದಿ ಬಂದ ನಂತರ ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ಗೂ ಒಂದು ಪ್ರಮಾಣ ಪತ್ರವನ್ನು ಸಲ್ಲಿಸುತ್ತೇವೆ. ಯಾವುದೇ ಕಾರಣಕ್ಕೂ ಹಿಂದುಳಿದ ವರ್ಗದವರಿಗೆ ಚುನಾವಣಾ ಮೀಸಲಾತಿ ನೀಡದೆ ಚುನಾವಣೆ ನಡೆಸಲು ಸರಕಾರಕ್ಕೆ ಮನಸ್ಸಿಲ್ಲ. ಹಿಂದುಳಿದ ವರ್ಗಗಳಿಗೆ ಚುನಾವಣಾ ಮೀಸಲಾತಿ ಕಲ್ಪಿಸಿಯೇ ಚುನಾವಣೆ ನಡೆಸುತ್ತೇವೆ' ಎಂದು ಅವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್, ಸಚಿವರಾದ ಗೋವಿಂದ ಕಾರಜೋಳ, ಬಿ.ಎ.ಬಸವರಾಜ, ಎಂಟಿಬಿ ನಾಗರಾಜ್, ಕೆ.ಎಸ್. ಈಶ್ವರಪ್ಪ, ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಡಾ.ಕಾಂತರಾಜು ವರದಿ ಅಪ್ರಸ್ತುತ
‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಡಾ.ಕಾಂತರಾಜು ಅವರ ವರದಿ ಕೇವಲ ‘ಆರ್ಥಿಕ ಮತ್ತು ಸಾಮಾಜಿಕ' ಹಿಂದುಳಿದಿರುವಿಕೆ ಬಗ್ಗೆ ಮಾತ್ರ ಇದೆ. ಅದರಲ್ಲಿ ರಾಜಕೀಯ ಹಿಂದುಳಿದಿರುವಿಕೆ ಇಲ್ಲ. ಹೀಗಾಗಿ ಆ ವರದಿ ಅಪ್ರಸ್ತುತ ಎಂಬ ತೀರ್ಮಾನಕ್ಕೆ ಸಭೆ ಬಂದಿದೆ. ಇದನ್ನು ಎಲ್ಲ ಪಕ್ಷಗಳ ಮುಖಂಡರು ಒಪ್ಪಿದ್ದಾರೆ. ಹಾಗಾಗಿಯೇ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಹೊಸ ಆಯೋಗ ರಚನೆಗೆ ತೀರ್ಮಾನ ಮಾಡಿದ್ದೇವೆ'
-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ







