ಉಳ್ಳಾಲ ನಗರಸಭೆ ಸಾಮಾನ್ಯ ಸಭೆ; ಅಕ್ರಮ ಕಟ್ಟಡ, ವಾರ್ಡ್ ಕಾಮಗಾರಿ ಬಗ್ಗೆ ಚರ್ಚೆ

ಉಳ್ಳಾಲ: ಕೆಲವು ವಾರ್ಡ್ ಗಳಿಗೆ ಮಾಡದ ಅಗತ್ಯ ಕಾಮಗಾರಿ, ನಿಯಮ ಉಲ್ಲಂಘಿಸಿ ನಡೆದ ಸ್ಥಾಯಿ ಸಮಿತಿ ಸಭೆ, ಮಡ್ಯಾರ್ ನಲ್ಲಿ ಕಟ್ಟಡ ನಿರ್ಮಾಣ ಕ್ಕೆ ನೀಡಿದ ಎನ್ ಒಸಿ ವಿಚಾರ ಸಂಬಂಧಿಸಿ ಭಾರೀ ಚರ್ಚೆ ನಡೆದು ಗದ್ದಲದ ವಾತಾವರಣ ಉಳ್ಳಾಲ ನಗರ ಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ನಗರ ಸಭೆ ಅಧ್ಯಕ್ಷ ಚಿತ್ರ ಕಲಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಡಲ್ಕೊರೆತ ದಿಂದ ತೊಂದರೆ ಗೊಳಗಾದ ಜನರಿಗೆ ಮೀಸಲಿಟ್ಟ ಕೋಟೆಕಾರು ಪಟ್ಟಣ ಪಂಚಾಯಿತ್ ವ್ಯಾಪ್ತಿಯ ಮಡ್ಯಾರ್ ಬಳಿ ಇರುವ ಜಾಗದಲ್ಲಿ ನಿರ್ಮಾಣ ಗೊಂಡ ಅಕ್ರಮ ಕಟ್ಟಡಗಳಿಗೆ ನಗರ ಸಭೆ ಎನ್ ಒಸಿ ನೀಡಿದ ಬಗೆ ಸದಸ್ಯರೊಬ್ಬರು ಪ್ರಸ್ತಾಪಿಸಿದಾಗ ಗದ್ದಲದ ವಾತಾವರಣ ನಿರ್ಮಾಣವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ರಾಯಪ್ಪ ರವರು ಎನ್ ಒಸಿ ನಗರ ಸಭೆಯಿಂದ ನೀಡಿಲ್ಲ. ನಿರ್ಮಿಸಿದ ಕಟ್ಟಡ ವನ್ನು ಹೊಡೆದುರುಳಿಸಲಾಗಿದೆ. ಆರೋಪಿ ವಿರುದ್ಧ ದೂರು ನೀಡಲಾಗಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲು ಆಗಿದೆ ಎಂದರು.
ಸ್ಥಾಯಿ ಸಮಿತಿ ಸದಸ್ಯತ್ವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸದಸ್ಯ ಜಬ್ಬಾರ್ ಅವರು, ನಾನು ಡಿಸೆಂಬರ್ ತಿಂಗಳಲ್ಲಿ ಸ್ಥಾಯಿ ಸಮಿತಿ ಸದಸ್ಯತ್ವಕೆ ರಾಜೀನಾಮೆ ನೀಡಿದ್ದೆ. ರಾಜೀನಾಮೆ ಅಂಗೀಕಾರ ಕೂಡಾ ಆಗಿದೆ. ತದನಂತರ ನನ್ನ ಬದಲಿಗೆ ಬೇರೆ ಸದಸ್ಯರನ್ನು ತೆಗೆಯದೆ ಕೇವಲ 10 ಜನ ಸದಸ್ಯರನ್ನು ಸೇರಿಸಿ ಸ್ಥಾಯಿ ಸಮಿತಿ ಸಭೆ ನಡೆಸಿದ್ದು ಕಾನೂನು ಉಲ್ಲಂಘನೆ. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಸಭೆಯಲ್ಲಿ ಅಂಗೀಕಾರ ವಾದ ನಿರ್ಣಯ ಗಳನ್ನು ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದರು.ಈ ವೇಳೆ ಸಭೆಯಲ್ಲಿ ಬಿರುಸಿನ ಚರ್ಚೆ ನಡೆಯಿತು.
ವಿದ್ಯುತ್ ಪವರ್ ಕಟ್ ಮಾಡುವ ಬಗ್ಗೆ ಸದಸ್ಯ ಮಹಮ್ಮದ್ ಮುಕಚೇರಿ ಅವರು, ಮೆಸ್ಕಾಂ ಎ.ಇ.ದಯಾನಂದ್ ರವರ ಗಮನ ಸೆಳೆದು ಎಪ್ರಿಲ್ ತಿಂಗಳಿಂದ ರಂಝಾನ್ ಆರಂಭ ಆಗುತ್ತದೆ. ರಾತ್ರಿ ವೇಳೆ ವಿದ್ಯುತ್ ಸಮಸ್ಯೆ ಆಗದಂತೆ ಕಾರ್ಯ ನಿರ್ವಹಣೆ ಮಾಡಬೇಕು ಎಂದು ವಿನಂತಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಝರೀನ ರವೂಫ್ ಉಪಸ್ಥಿತರಿದ್ದರು.