ಎಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಯ ಪ್ರಯಾಣ ದುಬಾರಿ

ಹೊಸದಿಲ್ಲಿ: ಗುರುವಾರ ರಾತ್ರಿ 12 ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿಯ ಪ್ರಯಾಣ ದುಬಾರಿಯಾಗಲಿದೆ. ಟೋಲ್ ತೆರಿಗೆಯು ಶೇಕಡಾ 10 ರಿಂದ 15 ರಷ್ಟು ದುಬಾರಿಯಾಗಲಿದೆ ಎಂದು ಎರಡು ವರದಿಗಳು ತಿಳಿಸಿವೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್ ತೆರಿಗೆಯನ್ನು 10 ರಿಂದ 65 ರೂ.ಗೆ ಹೆಚ್ಚಿಸಿದೆ. ಲಘು ವಾಹನಗಳಿಗೆ 10 ರಿಂದ 15 ರೂ.ಗೆ ಹಾಗೂ ವಾಣಿಜ್ಯ ವಾಹನಗಳ ಟೋಲ್ ಟ್ಯಾಕ್ಸ್ ಅನ್ನು 65 ರೂ. ಗೆ ಹೆಚ್ಚಿಸಲಾಗಿದೆ. ಈ ಮೂಲಕ ಎಪ್ರಿಲ್ 1ರಿಂದ ಹೆದ್ದಾರಿಯಲ್ಲಿ ಪ್ರಯಾಣಿಸುವವರ ಜೇಬಿಗೆ ಕತ್ತರಿ ಬೀಳಲಿದೆ.
ಎಕ್ಸ್‌ಪ್ರೆಸ್‌ವೇಯಲ್ಲಿ ಸರಾಯ್ ಕಾಲೇ ಖಾನ್‌ನಿಂದ ಆರಂಭಿಸಿ ಕಾಶಿ ಟೋಲ್ ಪ್ಲಾಜಾದವರೆಗೆ, ಕಾರುಗಳು ಹಾಗೂ ಜೀಪ್‌ಗಳಂತಹ ಲಘು ಮೋಟಾರು ವಾಹನಗಳಿಗೆ ಟೋಲ್ ತೆರಿಗೆಯನ್ನು ರೂ. 140 ರ ಬದಲಿಗೆ ರೂ. 155 ಪಾವತಿಸಬೇಕಾಗುತ್ತದೆ. ಸರಾಯ್ ಕಾಲೆ ಖಾನ್ ನಿಂದ ರಸೂಲ್‌ಪುರ ಸಿಕ್ರೋಡ್ ಪ್ಲಾಝಾದ ಹೊಸ ಬೆಲೆ ರೂ. 100 ಹಾಗೂ ಭೋಜ್‌ಪುರ ರೂ. 130 ಆಗಿರುತ್ತದೆ. ಎಲ್ಲ ಬಗೆಯ ವಾಹನಗಳಿಗೂ ಶೇ.10-15ರಷ್ಟು ಟೋಲ್ ರೇಟ್ ಹೆಚ್ಚಿಸಲಾಗಿದೆ.





