ಉ.ಪ್ರ.: 12ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ಮತ್ತೆ 7 ಮಂದಿಯ ಬಂಧನ

ಬಲ್ಲಿಯಾ, ಮಾ. 31: ಉತ್ತರಪ್ರದೇಶ ಶಾಲಾ ಮಂಡಳಿಯ 12ನೇ ತರಗತಿಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪತ್ರಕರ್ತರು ಸೇರಿದಂತೆ ಮತ್ತೆ 7 ಮಂದಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಳಿಕ ಬುಧವಾರ 24 ಜಿಲ್ಲೆಗಳಲ್ಲಿ ಇಂಗ್ಲಿಷ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಸೇರಿದಂತೆ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶಿಸಿದ್ದರು. ಇಂಗ್ಲಿಷ್ ಪರೀಕ್ಷೆಯನ್ನು ಎಪ್ರಿಲ್ 13ರಂದು ನಡೆಸಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಇನ್ನೂ 7 ಮಂದಿಯನ್ನು ನಾಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಸ್ಥಳೀಯ ಪತ್ರಕರ್ತರಾದ ದಿಗ್ವಿಜಯ್ ಸಿಂಗ್ ಹಾಗೂ ಮನೋಜ್ ಗುಪ್ತಾ ಕೂಡ ಸೇರಿದ್ದಾರೆ ಎಂದು ಡಿಎಸ್ಪಿ ಶಿವ ನಾರಾಯಣ ವ್ಯಾಸ್ ಅವರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಒಟ್ಟು 24 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.





