ದೇಶದ ದೊಡ್ಡ ಪಕ್ಷ ಗೂಂಡಾಗಿರಿಯಲ್ಲಿ ತೊಡಗಿದರೆ, ತಪ್ಪು ಸಂದೇಶ ರವಾನೆಯಾಗುತ್ತದೆ: ಕೇಜ್ರಿವಾಲ್

ಹೊಸದಿಲ್ಲಿ, ಮಾ. 31: ದೇಶದ ದೊಡ್ಡ ಪಕ್ಷ ಗೂಂಡಾಗಿರಿಯಲ್ಲಿ ತೊಡಗಿದರೆ, ತಪ್ಪು ಸಂದೇಶ ರವಾನೆಯಾಗುತ್ತದೆ. ಅಲ್ಲದೆ, ಇಂತಹ ಸನ್ನಿವೇಶದಲ್ಲಿ ದೇಶ ಪ್ರಗತಿಯಾಗಲು ಸಾಧ್ಯವಿಲ್ಲ ಎಂದು ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ.
ಬಿಜೆಪಿಯ ಯುವ ಘಟಕದ ಸದಸ್ಯರು ಕೇಜ್ರಿವಾಲ್ ಅವರ ನಿವಾಸದ ಹೊರಗೆ ದಾಂಧಲೆ ನಡೆಸಿ ಸಿಸಿಟಿವಿ ಕ್ಯಾಮೆರಾ ಹಾಗೂ ರಕ್ಷಣಾ ತಡೆ ಗೋಡೆಗೆ ಹಾನಿ ಎಸಗಿದ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘‘ಅರವಿಂದ ಕೇಜ್ರಿವಾಲ್ ಮುಖ್ಯವಲ್ಲ. ಆದರೆ, ದೇಶ ಮುಖ್ಯ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಕೂಡ ನಾನು ಸಿದ್ಧ. ಇಂತಹ ಗೂಂಡಾಗಿರಿಯಿಂದ ಭಾರತ ಪ್ರಗತಿಯಾಗದು’’ ಎಂದು ಅವರು ಹೇಳಿದ್ದಾರೆ.
‘‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ದೇಶದ ದೊಡ್ಡ ಪಕ್ಷ ಇಂತಹ ಗೂಂಡಾಗಿರಿ ನಡೆಸಿದರೆ, ಜನರಲ್ಲಿ ತಪ್ಪು ಸಂದೇಶ ಹರಡುತ್ತದೆ. ಇದು ಸರಿಯಾದ ದಾರಿ (ಯಾವುದನ್ನಾದರೂ ಎದುರಿಸಲು) ಎಂದು ಜನರು ಭಾವಿಸುತ್ತಾರೆ’’ ಎಂದು ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.
Next Story





