ಬೇರೆ ರಾಜ್ಯದ ಎಸ್ಸಿ, ಎಸ್ಟಿ, ಒಬಿಸಿ ಮೀಸಲಿಗೆ ನಿಯಮ: ಪರಿಶೀಲಿಸಿ ಸೂಕ್ತ ನಿರ್ಧಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು, ಮಾ.31: ಹೊರ ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದು ನೆಲೆಸಿರುವ ಎಸ್ಸಿ, ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗಗಳ ಜನರಿಗೆ ರಾಜ್ಯ ಸರಕಾರಿ ಉದ್ಯೋಗಳಲ್ಲಿ ಮೀಸಲು ಕಲ್ಪಿಸುವುದಕ್ಕೆ ನಿಬರ್ಂಧ ಹೇರಲು ಅಗತ್ಯ ತಿದ್ದುಪಡಿ ನಿಯಮ ರೂಪಿಸುವ ವಿಚಾರವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಕರ್ನಾಟಕಕ್ಕೆ ವಲಸೆ ಬಂದಿರುವ ಹೊರ ರಾಜ್ಯದ ಎಸ್ಸಿ-ಎಸ್ಟಿ ಮತ್ತು ಒಬಿಸಿ ಜನರಿಗೆ ರಾಜ್ಯ ಸರಕಾರಿ ಉದ್ಯೋಗಳಲ್ಲಿ ಮೀಸಲು ಕಲ್ಪಿಸುವುದನ್ನು ನಿಬರ್ಂಧಿಸಲು ಕರ್ನಾಟಕ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲು) ಕಾಯ್ದೆ-1990 ಮತ್ತು ಕರ್ನಾಟಕ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲು) ಅಧಿನಿಯಮಗಳು-1992ಕ್ಕೆ ಅಗತ್ಯ ತಿದ್ದುಪಡಿ ತರಲು ರಾಜ್ಯ ಸರಕಾರಕ್ಕೆ ಆದೇಶಿಸಬೇಕು ಎಂದು ಕೋರಿ ಡಾ. ಎಚ್. ಕೃಷ್ಣರಾಮ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ಕುರಿತಂತೆ ಕೆಲ ಕಾಲ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರು ಈ ಕುರಿತು ಸರಕಾರಕ್ಕೆ ಮನವಿ ಪತ್ರ ಸಲ್ಲಿಸಬೇಕು. ಅರ್ಜಿದಾರರ ಮನವಿ ಕುರಿತಂತೆ ಪರಿಶೀಲನೆ ನಡೆಸಿದ ನಂತರ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್.ವಿ. ಗಿರಿಕುಮಾರ್ ವಾದ ಮಂಡಿಸಿ, ಹೊರ ರಾಜ್ಯದ ಎಸ್ಸಿ, ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅನೇಕ ಜನ ಕರ್ನಾಟಕಕ್ಕೆ ವಲಸೆ ಬಂದು ಇಲ್ಲಿಯೇ ನೆಲೆಯೂರಿದ್ದಾರೆ. ಅವರು ರಾಜ್ಯದಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲು ಕೋಟಾದಡಿ ರಾಜ್ಯ ಸರಕಾರಿ ಉದ್ಯೋಗ ಗಿಟ್ಟಿಸುತ್ತಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರುವ ಎಸ್ಸಿ-ಎಸ್ಟಿ ಹಾಗೂ ಒಬಿಸಿಯವರು ಸರಕಾರದ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದರು.
ಅಲ್ಲದೇ, ರಾಷ್ಟ್ರಪತಿಗಳು 1950ರಲ್ಲಿ ಒಂದು ರಾಜ್ಯದ ಎಸ್ಸಿ-ಎಸ್ಟಿ ಮತ್ತು ಒಬಿಸಿಗೆ ಸೇರಿದ ಜನ ಮತ್ತೊಂದು ರಾಜ್ಯದಲ್ಲಿ ಮೀಸಲು ಸೌಲಭ್ಯ ಪಡೆಯುವಂತಿಲ್ಲ ಎಂದು ಆದೇಶಿಸಿದ್ದಾರೆ. ಕೇಂದ್ರ ಸರಕಾರವು 1977ರಲ್ಲಿ ಎಲ್ಲ ರಾಜ್ಯಗಳಿಗೆ ಸ್ಪಷ್ಟ ಆದೇಶ ಮಾಡಿದೆ. ಅದರ ಅನುಸಾರ ಗೋವಾ, ಮಹಾರಾಷ್ಟ್ರ ಮತ್ತು ಅಸ್ಸಾಂ ಸೇರಿದಂತೆ ಇತರೆ ರಾಜ್ಯಗಳು ನಿಯಮ ರೂಪಿಸಿ ಜಾರಿಗೆ ತಂದಿವೆ.
ಕರ್ನಾಟಕದಲ್ಲಿ ಜನಿಸಿರುವ ಎಸ್ಸಿ-ಎಸ್ಟಿ ಮತ್ತು ಒಬಿಸಿಯವರಿಗೆ ಮಾತ್ರ ಸರಕಾರಿ ಉದ್ಯೋಗದಲ್ಲಿ ಆಯಾ ಜಾತಿಯಲ್ಲಿ ಮೀಸಲು ಕಲ್ಪಿಸುವ ಸಂಬಂಧ ಯಾವುದೇ ನಿಮಮ ರಾಜ್ಯದಲ್ಲಿ ಇಲ್ಲ. ಹೀಗಾಗಿ, ಈ ಕುರಿತು ಕರ್ನಾಟಕ ಎಸ್ಸಿ, ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲು) ಕಾಯ್ದೆ-1990 ಮತ್ತು ಕರ್ನಾಟಕ ಎಸ್ಸಿ, ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲು) ಅಧಿನಿಯಮಗಳು-1992ಕ್ಕೆ ಅಗತ್ಯ ತಿದ್ದುಪಡಿ ನಿಯಮ ರೂಪಿಸಲು ಸರಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.







